ADVERTISEMENT

ಮನ್‌‌ಪ್ರೀತ್‌ ಸಿಂಗ್‌ ಸಾರಥ್ಯ

ಕಾಮನ್‌ವೆಲ್ತ್‌ ಕೂಟಕ್ಕೆ 18 ಸದಸ್ಯರ ಭಾರತ ಹಾಕಿ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 12:44 IST
Last Updated 20 ಜೂನ್ 2022, 12:44 IST
ಮನ್‌ಪ್ರೀತ್‌ ಸಿಂಗ್
ಮನ್‌ಪ್ರೀತ್‌ ಸಿಂಗ್   

ನವದೆಹಲಿ (ಪಿಟಿಐ): ಮುಂಬರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ಹಾಕಿ ತಂಡವನ್ನು ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಡ್ರ್ಯಾಗ್‌ಫ್ಲಿಕ್‌ ಪರಿಣಿತ ಹರ್ಮನ್‌ಪ್ರೀತ್‌ ಸಿಂಗ್ ಉಪನಾಯಕನ ಜವಾಬ್ದಾರಿ ನಿರ್ವಹಿಸುವರು.

18 ಸದಸ್ಯರ ತಂಡವನ್ನು ಹಾಕಿ ಇಂಡಿಯಾ (ಎಚ್‌ಐ) ಸೋಮವಾರ ಪ್ರಕಟಿಸಿತು. ಕಾಮನ್‌ವೆಲ್ತ್‌ ಕೂಟಕ್ಕೆ ಎರಡನೇ ಹಂತದ ಆಟಗಾರರನ್ನು ಒಳಗೊಂಡ ತಂಡವನ್ನು ಕಳುಹಿಸಲು ಎಚ್‌ಐ ನಿರ್ಧರಿಸಿತ್ತು. ಇದೀಗ ಪೂರ್ಣ ಸಾಮರ್ಥ್ಯದ ತಂಡವನ್ನೇ ಆಯ್ಕೆ ಮಾಡಿದೆ.

ಏಷ್ಯನ್‌ ಗೇಮ್ಸ್‌ಅನ್ನು ಮುಂದಿನ ವರ್ಷಕ್ಕೆ ಮುಂದೂಡಿರುವ ಕಾರಣ ಹಾಕಿ ಇಂಡಿಯಾ ಈ ತೀರ್ಮಾನ ತೆಗೆದುಕೊಂಡಿದೆ.

ADVERTISEMENT

ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ ತಂಡ ಘಾನಾ, ವೇಲ್ಸ್‌, ಕೆನಡಾ ಮತ್ತು ಇಂಗ್ಲೆಂಡ್‌ ಜತೆ ’ಬಿ‘ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ತನ್ನ ಮೊದಲ ಪಂದ್ಯದಲ್ಲಿ ಜುಲೈ 31 ರಂದು ಘಾನಾ ತಂಡವನ್ನು ಎದುರಿಸಲಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ತಂಡವನ್ನು ಮುನ್ನಡೆಸಿದ್ದ ಮನ್‌ಪ್ರೀತ್‌ ಅವರಿಗೆ ಮತ್ತೆ ನಾಯಕತ್ವದ ಜವಾಬ್ದಾರಿ ಲಭಿಸಿದೆ. ಇತ್ತೀಚೆಗೆ ನಡೆದ ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯಗಳಿಗೆ ಭಾರತ ತಂಡವನ್ನು ಅಮಿತ್‌ ರೋಹಿದಾಸ್‌ ಮುನ್ನಡೆಸಿದ್ದರು.

ಗಾಯದ ಕಾರಣ ವಿಶ್ರಾಂತಿಯಲ್ಲಿದ್ದ ಗೋಲ್‌ಕೀಪರ್‌ ಕೃಷ್ಣ ಬಿ ಪಾಠಕ್‌ ತಂಡಕ್ಕೆ ವಾಪಸಾಗಿದ್ದಾರೆ. ಎಫ್‌ಐಎಚ್‌ ಪ್ರೊ ಲೀಗ್‌ಗೆ ತಂಡದಲ್ಲಿದ್ದ ಗೋಲ್‌ಕೀಪರ್ ಸೂರಜ್‌ ಕರ್ಕೇರ, ಶಿಲಾನಂದ ಲಾಕ್ರ ಮತ್ತು ಸುಖ್‌ಜೀತ್‌ ಸಿಂಗ್‌ ಅವರನ್ನು ಕೈಬಿಡಲಾಗಿದೆ.

2018 ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ ಹಾಕಿ ತಂಡ ನಾಲ್ಕನೇ ಸ್ಥಾನ ಗಳಿಸಿತ್ತು.

ಭಾರತ ತಂಡ

ಗೋಲ್‌ಕೀಪರ್ಸ್: ಪಿ.ಆರ್‌.ಶ್ರೀಜೇಶ್, ಕೃಷ್ಣ ಬಹಾದೂರ್‌ ಪಾಠಕ್

ಡಿಫೆಂಡರ್ಸ್: ವರುಣ್‌ ಕುಮಾರ್, ಸುರೇಂದರ್‌ ಕುಮಾರ್, ಹರ್ಮನ್‌ಪ್ರೀತ್‌ ಸಿಂಗ್, ಅಮಿತ್‌ ರೋಹಿದಾಸ್, ಜುಗ್ರಾಜ್‌ ಸಿಂಗ್, ಜರ್ಮನ್‌ಪ್ರೀತ್‌ ಸಿಂಗ್

ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್‌ ಸಿಂಗ್, ಹಾರ್ದಿಕ್‌ ಸಿಂಗ್, ವಿವೇಕ್‌ ಸಾಗರ್ ಪ್ರಸಾದ್, ಶಂಷೇರ್‌ ಸಿಂಗ್, ಆಕಾಶ್‌ದೀಪ್‌ ಸಿಂಗ್, ನೀಲಕಂಠ ಶರ್ಮ

ಫಾರ್ವರ್ಡ್ಸ್‌: ಮನ್‌ದೀಪ್‌ ಸಿಂಗ್, ಗುರ್ಜಂತ್‌ ಸಿಂಗ್, ಲಲಿತ್‌ ಕುಮಾರ್ ಉಪಾಧ್ಯಾಯ, ಅಭಿಷೇಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.