
ನವದೆಹಲಿ: ಭಾರತದ ತಾರೆಯರಾದ ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಅವರು ಬುಧವಾರ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗೆಲುವಿನೊಡನೆ ಅಭಿಯಾನ ಆರಂಭಿಸಿದರು.
ವೃತ್ತಿಬದುಕಿನ ಸಂಧ್ಯಾ ಕಾಲದಲ್ಲಿರುವ ಈ ಅನುಭವಿಗಳು ಋತುವಿನ ತಮ್ಮ ಮೊದಲ ಟೂರ್ನಿಯಲ್ಲಿ ಶುಭಾರಂಭ ಮಾಡುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡರು. 2022ರ ಐತಿಹಾಸಿಕ ಥಾಮಸ್ ಕಪ್ ಗೆಲುವು ಸೇರಿದಂತೆ ಭಾರತದ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಸಂಚಲನ ಮೂಡಿಸಿದ್ದ ಈ ಆಟಗಾರರು ಪ್ರಸ್ತುತ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.
ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ, 2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಅವರು 15-21, 21-6, 21-19ರಿಂದ ಸ್ವದೇಶದ ತರುಣ್ ಮನ್ನೇಪಳ್ಳಿ ಅವರನ್ನು ಮಣಿಸಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 32 ವರ್ಷದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್ ಅವರನ್ನು ಎದುರಿಸುವರು.
ತೆಲಂಗಾಣದ ಯುವ ಆಟಗಾರ ತರುಣ್ ಮೊದಲ ಗೇಮ್‌ನಲ್ಲಿ ಪಾರಮ್ಯ ಮೆರೆದರು. ಆದರೆ, ನಂತರದಲ್ಲಿ ಪುಟಿದೆದ್ದ ಶ್ರೀಕಾಂತ್ ಗೇಮ್ ಸಮಬಲ ಸಾಧಿಸಿದರು. ರೋಚಕವಾಗಿ ಸಾಗಿದ ನಿರ್ಣಾಯಕ ಗೇಮ್‌ನಲ್ಲಿ 17–19ರ ಹಿನ್ನಡೆಯಿಂದ ಚೇತರಿಸಿಕೊಂಡು ಮೋಡಿ ಮಾಡಿದರು. ಗುಂಟೂರಿನ ಶ್ರೀಕಾಂತ್ ಅವರು 2025ರಲ್ಲಿ ಮಲೇಷ್ಯಾ ಮಾಸ್ಟರ್ಸ್ ಮತ್ತು ಸೈಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು.
ಎಚ್.ಎಸ್. ಪ್ರಣಯ್ ಆಟದ ವೈಖರಿ
ವಿಶ್ವ ಕ್ರಮಾಂಕದಲ್ಲಿ 38ನೇ ಸ್ಥಾನದಲ್ಲಿರುವ ಪ್ರಣಯ್ 22-20, 21-18ರ ನೇರ ಗೇಮ್‌ಗಳಿಂದ ಕಳೆದ ವರ್ಷದ ರನ್ನರ್ ಅಪ್ ಲೀ ಚೆಯುಕ್ ಯಿಯು ಅವರಿಗೆ ಆಘಾತ ನೀಡಿದರು. ದೆಹಲಿಯ ಪ್ರತಿಕೂಲ ವಾತಾವರಣದಿಂದಾಗಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ಪ್ರಣಯ್ ಕೊನೆಯ ಕ್ಷಣದಲ್ಲಿ ಅವಕಾಶ ಪಡೆದರು. 33 ವರ್ಷದ ಪ್ರಣಯ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಪುರದ ಲೋಹ್ ಕೀನ್ ಯೂ ಅವರನ್ನು ಎದುರಿಸಲಿದ್ದಾರೆ.
ಕಳೆದ ವಾರ ಮಲೇಷ್ಯಾ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ತಾರೆ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಮೊದಲ ಗೇಮ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದ ಸಿಂಧು 22-20, 12-21, 15-21ರಿಂದ ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ವಿರುದ್ಧ ವೀರೋಚಿತ ಸೋಲು ಅನುಭವಿಸಿದರು.
ಭಾರತದ ಉದಯೋನ್ಮುಖ ಆಟಗಾರ್ತಿ ಮಾಳವಿಕಾ ಬನ್ಸೋಡ್ 21-18, 21-19ರಿಂದ ತೈವಾನ್‌ನ ಪೈ ಯು ಪೊ ವಿರುದ್ಧ ಗೆಲುವು ಸಾಧಿಸಿದರು. ತವರಿನ ಮತ್ತೊಬ್ಬ ಆಟಗಾರ್ತಿ ತನ್ವಿ ಶರ್ಮಾ 20–22, 21–18, 13–21ರಿಂದ ಚೀನಾದ ವಾಂಗ್ ಝಿಯಿ ಅವರಿಗೆ ಮಣಿದರು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎರಡನೇ ಸುತ್ತು ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಅವರ ಎದುರಾಳಿ ಮಲೇಷ್ಯಾದ ಜೋಡಿಯು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ನೇರವಾಗಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.