ಸಂಗ್ರಹ ಚಿತ್ರ
ಟೋಕಿಯೊ: ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳ ನೀರಸ ನಿರ್ವಹಣೆ ಗುರುವಾರವೂ ಮುಂದುವರಿಯಿತು. ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಹೊರಬಿದ್ದರೆ, ಡಬಲ್ಸ್‌ನಲ್ಲಿ ಅನುಭವಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ ಎರಡನೇ ಸುತ್ತಿನಲ್ಲೇ ಹೊರಬಿತ್ತು.
ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್ ಸುಮಾರು ಒಂದು ಗಂಟೆ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 19–21, 11–21ರಲ್ಲಿ ಜಪಾನ್‌ನ ಕೊಡೈ ನರವೊಕಾ ಅವರಿಗೆ ಮಣಿಸಿದರು.
23 ವರ್ಷದ ಲಕ್ಷ್ಯ ಮೊದಲ ಸುತ್ತಿನಲ್ಲಿ ಚೀನಾದ ವಾಂಗ್ ಝೆಂಗ್ ಷಿಂಗ್ ವಿರುದ್ಧ ಜಯಗಳಿಸಿದ ರೀತಿ ಭರವಸೆ ಮೂಡಿಸಿತ್ತು. ಆದರೆ ಅದೇ ರೀತಿಯ ಆಟ ಅವರಿಂದ ಬರಲಿಲ್ಲ.
ಡಬಲ್ಸ್‌ನಲ್ಲಿ ಸಾತ್ವಿಕ್– ಚಿರಾಗ್ ಜೋಡಿ 22–24, 14–21ರಲ್ಲಿ ಐದನೇ ಶ್ರೇಯಾಂಕದ ಲಿಯಾಂಗ್ ವೀ ಕೆಂಗ್– ವಾಂಗ್ ಚಾಂಗ್ ಜೋಡಿಯೆದುರು ಸೋಲನುಭವಿಸಿತು. ಈ ಎರಡೂ ಜೋಡಿಗಳು ಹಿಂದೆ ವಿವಿಧ ಅವಧಿಗಳಲ್ಲಿ ವಿಶ್ವದಲ್ಲಿ ಅಗ್ರ ಕ್ರಮಾಂಕ ಪಡೆದಿದ್ದವು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತರಾದ ವೀ ಕೆಂಗ್– ವಾಂಗ್ ಜೋಡಿ, ಭಾರತದ ಆಟಗಾರರ ಎದುರು ಇದುವರೆಗಿನ ಮುಖಾಮುಖಿಯಲ್ಲಿ ಗೆಲುವಿನ ದಾಖಲೆಯನ್ನು 7–2ಕ್ಕೆ ಹೆಚ್ಚಿಸಿತು.
ನಿಧಾನಗತಿಯ ಆರಂಭದ ನಂತರ ಭಾರತದ ಜೋಡಿ ಮೊದಲ ಗೇಮ್‌ನಲ್ಲಿ 18–14 ರಲ್ಲಿ ಮುನ್ನಡೆ ಪಡೆದಿತ್ತು. ಆದರೆ ಅದೇ ವೇಗ ಕಾಯ್ದುಕೊಳ್ಳಲಿಲ್ಲ. ಚೀನಾದ ಎದುರಾಳಿಗಳು ರೋಚಕ ಹೋರಾಟದಲ್ಲಿ ಆ ಗೇಮ್ ಪಡೆದರು. ನಂತರ ಅದೇ ಹುರುಪಿನಲ್ಲಿ ಎರಡನೇ ಗೇಮ್‌ನಲ್ಲಿ ಸಹ ಮೇಲುಗೈ ಸಾಧಿಸಿದರು. ಇದು ಈ ಜೋಡಿಯೆದುರು ಭಾರತದ ಆಟಗಾರರಿಗೆ ಸತತ ನಾಲ್ಕನೇ ಸೋಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.