ADVERTISEMENT

ಪ್ರೊ ಲೀಗ್ ಹಾಕಿ: : ಸ್ಪೇನ್‌ ಎದುರು ಭಾರತಕ್ಕೆ ಸೋಲು

ಪ್ರೊ ಲೀಗ್ ಹಾಕಿ: ಮುಂದುವರಿದ ನಿರಾಶಾದಾಯಕ ಓಟ

ಪಿಟಿಐ
Published 21 ಫೆಬ್ರುವರಿ 2026, 15:33 IST
Last Updated 21 ಫೆಬ್ರುವರಿ 2026, 15:33 IST
   

ಹೋಬಾರ್ಟ್: ಎಫ್‌ಐಎಚ್‌ ಪುರುಷರ ಪ್ರೊ ಲೀಗ್‌ನಲ್ಲಿ ಭಾರತ ಹಾಕಿ ತಂಡದ ನಿರಾಶಾದಾಯಕ ಓಟ ಎಗ್ಗಿಲ್ಲದೇ ಮುಂದುವರಿಯಿತು. ಶನಿವಾರ ನಡೆದ ಹೋಬಾರ್ಟ್‌ ಲೆಗ್‌ನ ಮೊದಲ ಪಂದ್ಯದಲ್ಲಿ ಸ್ಪೇನ್ 2–0 ಗೋಲುಗಳಿಂದ ಭಾರತ ತಂಡವನ್ನು ಸೋಲಿಸಿತು.

ಇಗ್ನೇಸಿಯೊ ಅಬಾಜೊ ಆರನೇ ನಿಮಿಷ ಮತ್ತು ಇಗ್ನೇಸಿಯೊ ಕೊಬೊಸ್ 36ನೇ ನಿಮಿಷ ಸ್ಪೇನ್ ತಂಡದ ಪರ ಗೋಲುಗಳನ್ನು ಹೊಡೆದರು. ಕರಾರುವಾಕ್ ಫಿನಿಷಿಂಗ್ ಮತ್ತು ಶಿಸ್ತುಬದ್ಧ ರಕ್ಷಣಾ ಆಟದ ಸಂಯೋಜನೆಯಿಂದ ಸ್ಪೇನ್ ತಂಡ ಗೆಲುವು ಸಾಧಿಸಿತು.

ತನಗೆ ದೊರೆತ ಗೋಲಿನ ಅವಕಾಶಗಳನ್ನು ಸ್ಪೇನ್ ಬಂಡವಾಳ ಮಾಡಿಕೊಂಡಿತು. ಭಾರತ ತಂಡವು ಆಕ್ರಮಣಕಾರಿ ಆಟದ ಮನೋಭಾವ ಪ್ರದರ್ಶಿಸಿದರೂ, ಪಾಲಿಗೆ ಬಂದ ಉತ್ತಮ ಅವಕಾಶಗಳನ್ನು ಪರಿವರ್ತಿಸುವಲ್ಲಿ ಎಡವಿತು.

ADVERTISEMENT

ತವರಿನಲ್ಲಿ ಈಚೆಗೆ ನಡೆದ ರೂರ್ಕೆಲಾ ಲೆಗ್‌ನಲ್ಲಿ ಭಾರತ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತು ಪ್ರೊ ಲೀಗ್ ಋತುವನ್ನು ನಿರಾಸೆಯಿಂದ ಆರಂಭಿಸಿತ್ತು. ಭಾರತ ವಿರುದ್ಧ ಬೆಲ್ಜಿಯಂ ಮತ್ತು ಅರ್ಜೆಂಟೀನಾ ತಂಡಗಳು ತಲಾ ಎರಡು ಬಾರಿ ಜಯಗಳಿಸಿದ್ದವು. ಹಾರ್ದಿಕ್ ಸಿಂಗ್ ಅವರ ಹೊಸ ನಾಯಕತ್ವದಲ್ಲಿ ತಾಜಾ ಆರಂಭ ಪಡೆಯುವ ಆಸೆ ಕೈಗೂಡಲಿಲ್ಲ.

ಭಾರತ ತಂಡವು ಭಾನುವಾರ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮೂರು ತಂಡಗಳಿರುವ ಹೋಬಾರ್ಟ್‌ ಲೆಗ್‌ ಇದೇ 25ರವರೆಗೆ ನಡೆಯಲಿದೆ. 

ಆರಂಭದಲ್ಲಿ ಭಾರತ ತಂಡ ಚುರುಕಿನ ಪಾಸ್‌ಗಳ ಮೂಲಕ ನಿಯಂತ್ರಣ ಸಾಧಿಸಲು ಯತ್ನಿಸಿತು. ಆದರೆ ಸ್ಪೇನ್ ಪ್ರತಿಯಾಗಿ ನಡೆಸಿದ ದಾಳಿಗಳಿಗೆ ಯಶಸ್ಸು ದೊರೆಯಿತು. ಇಂಥ ಒಂದು ಯತ್ನದಲ್ಲಿ ಅಬಾಜೊ ಅವರು ಚೆಂಡನ್ನು ಗುರಿಮುಟ್ಟಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದರು.

ವಿಚಲಿತರಾಗದ ಭಾರತ ತಂಡವೂ ಮಿಡ್‌ಫೀಲ್ಡ್‌ನಲ್ಲಿ ನಿಯಂತ್ರಣ ಸಾಧಿಸಿ ಸ್ಪೇನ್‌ನ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಲು ಮುಂದಾಯಿತು. ಮೊದಲ ಕ್ವಾರ್ಟರ್‌ನ ಕೊನೆಯಲ್ಲಿ ಅಭಿಷೇಕ್ ಅವರು ಗೋಲಿನತ್ತ ಶಕ್ತಿಶಾಲಿಯಾಗಿ ನಿರ್ದೇಶಿಸಿದ ಚೆಂಡನ್ನು ಸ್ಪೇನ್‌ನ ಗೋಲ್‌ಕೀಪರ್ ಲೂಯಿಸ್ ಕಾಲ್ಝಾಡೊ ಅಮೋಘವಾಗಿ ತಡೆದರು.

ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಆಕ್ರಮಣದ ಆಟಕ್ಕೆ ಮುಂದಾದವು. 24ನೇ ನಿಮಿಷ ಸ್ಪೇನ್ ತಂಡದ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲಿನತ್ತ ಕ್ಷಿಪ್ರಗತಿಯಲ್ಲಿ ಸಾಗಿದ ಚೆಂಡಿಗೆ ಗೋಲ್‌ಕೀಪರ್ ಸೂರಜ್ ಕರ್ಕೇರಾ ತಡೆಯೊಡ್ಡಿದರು. ವಿರಾಮಕ್ಕೆ ಸ್ವಲ್ಪ ಮೊದಲು ಸ್ಪೇನ್ ತಂಡ, ಭಾರತದ ರಕ್ಷಣೆಯ ಮೇಲೆ ಸತತವಾಗಿ ಒತ್ತಡ ಹೇರಿತು. ಅದರೆ ಯಶಸ್ಸು ದೊರೆಯಲಿಲ್ಲ.

ಉತ್ತರಾರ್ಧದ ಆರಂಭದಲ್ಲೂ ಸ್ಪೇನ್ ಆಕ್ರಮಣಕಾರಿ ಆಟವಾಡಿತು. ಆದರೆ ಸೂರಜ್ ಅವರು ಎದುರಾಳಿ ತಂಡದ ಗೋಲಿನ ಯತ್ನಗಳನ್ನು ಅತ್ಯುತ್ತಮವಾಗಿ ತಡೆದರು. ಕೊನೆಗೂ ಸ್ಪೇನ್‌ ಮುನ್ನಡೆ ಹಿಗ್ಗಿಸುವಲ್ಲಿ ಯಶಸ್ಸು ಪಡೆಯಿತು. ಗೋಲು ಆವರಣದಲ್ಲಿ ಹೊಂಚುಹಾಕುತ್ತಿದ್ದ ಕೊಬೊಸ್‌ ತಮ್ಮ ಎದುರು ಕಾವಲು ಇಲ್ಲದ ಲಾಭ ಬಳಸಿಕೊಂಡರು. ನಂತರ ಸ್ಪೇನ್ ತಂಡದ್ದೇ ಮೇಲುಗೈಯಾಯಿತು. ಅದು ಐದು ಪೆನಾಲ್ಟಿ ಕಾರ್ನರ್‌ಗಳನ್ನು ಸಂಪಾದಿಸಿತು. ಆದರೆ ಭಾರತದ ರಕ್ಷಣೆಯ ವಿಭಾಗ ಜಾಗೃತವಾಗಿದ್ದು, ಮತ್ತಷ್ಟು ಗೋಲುಗಳಿಗೆ ಅವಕಾಶ ನೀಡಲಿಲ್ಲ.

ಪಂದ್ಯದ ಕೊನೆಯ ಅವಧಿಯಲ್ಲಿ ಸೂರಜ್ ಬದಲು ಅವಕಾಶ ಪಡೆದ ಗೋಲ್‌ ಕೀಪರ್ ಎಚ್‌.ಎಸ್‌.ಮೋಹಿತ್ ಅವರು ಸ್ಫೂರ್ತಿಯುತ ತಡೆಗಳ ಮೂಲಕ ಗಮನ ಸೆಳೆದರು. ಮುಕ್ತಾಯಕ್ಕೆ ನಾಲ್ಕು ನಿಮಿಷಗಳಿರುವಾಗ ಭಾರತ ತಂಡವು ಗೋಲ್‌ಕೀಪರ್ ಅವರನ್ನು ಹಿಂದಕ್ಕೆ ಪಡೆದು ಹೆಚ್ಚುವರಿಯಾಗಿ ಔಟ್‌ಫೀಲ್ಡ್‌ ಆಟಗಾರನನ್ನು ಆಡಿಸಿತು. ಆದರೆ ಇದರಿಂದ ಲಾಭವೇನೂ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.