ಆ್ಯಂಟ್‌ವರ್ಪ್: ಎಫ್‌ಐಎಚ್ ಪ್ರೊ ಲೀಗ್‌ನ ಯುರೋಪಿಯನ್ ಲೆಗ್‌ನಲ್ಲಿ ಭಾರತದ ಪುರುಷರ ಹಾಕಿ ತಂಡದ ಕಳಪೆ ಪ್ರದರ್ಶನ ಮುಂದುವರೆದಿದ್ದು, ಸತತ ಆರನೇ ಸೋಲು ಅನುಭವಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ 2–3 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸೋತಿದೆ.
ಇದರೊಂದಿಗೆ ಭಾರತ ತಂಡವು ನೆದರ್ಲೆಂಡ್ಸ್, ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ತಲಾ ಎರಡು ಪಂದ್ಯಗಳಲ್ಲೂ ಸೋತಂತಾಗಿದೆ. ಶನಿವಾರ ಇಷ್ಟೇ ಗೋಲುಗಳ (2–3) ಅಂತರದಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಮಣಿದಿತ್ತು. ಇದೇ 21ರಂದು ಮುಂದಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಆಡಲಿದೆ.
ಭಾರತದ ಪರ ಸಂಜಯ್ (3ನೇ ನಿಮಿಷ), ದಿಲ್‌ಪ್ರೀತ್ ಸಿಂಗ್ (36ನೇ ನಿ.) ಗೋಲು ಗಳಿಸಿದರು. ಆಸ್ಟ್ರೇಲಿಯಾ ಪರ ಟಿಮ್ ಬ್ರಾಂಡ್ (4ನೇ ನಿ.), ಬ್ಲೇಕ್ ಗೋವರ್ಸ್ (5ನೇ ನಿ.) ಮತ್ತು ಕೂಪರ್ ಬರ್ನ್ಸ್ (18ನೇ ನಿ.) ಚೆಂಡನ್ನು ಗುರಿ ಸೇರಿಸಿದರು.
ಭಾರತ ತಂಡದ ಮಾಜಿ ನಾಯಕ ಮನ್‌ಪ್ರೀತ್ ಸಿಂಗ್ ಅವರಿಗೆ ಇದು 400ನೇ ಪಂದ್ಯವಾಗಿತ್ತು. ಅದನ್ನು ಸ್ಮರಣೀಯಗೊಳಿಸುವಲ್ಲಿ ತಂಡದ ಆಟಗಾರರು ಎಡವಿದರು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಗಾಯಾಳಾಗಿರುವ ಕಾರಣ ಈ ಪಂದ್ಯವನ್ನೂ ಹಾರ್ದಿಕ್ ಸಿಂಗ್ ಮುನ್ನಡೆಸಿದರು.
ಭಾರತ ತಂಡವು ಉತ್ತಮ ಆರಂಭ ಪಡೆದಿತ್ತು. ಮೂರನೇ ನಿಮಿಷದಲ್ಲಿ ಸಂಜಯ್ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ, ನಂತರದ ಎರಡು ನಿಮಿಷಗಳ ಅಂತರದಲ್ಲಿ ಟಿಮ್ ಮತ್ತು ಬ್ಲೇಕ್ ಅವರು ತಲಾ ಒಂದು ಗೋಲು ಗಳಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಮೇಲುಗೈ ಒದಗಿಸಿಕೊಟ್ಟರು. ಬಳಿಕ ಸತತ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಆಸ್ಟ್ರೇಲಿಯಾ ಪಡೆಯಿತು. ಕೊನೆಯ ಅವಕಾಶದಲ್ಲಿ ಕೂಪರ್, ಗೋಲು ಗಳಿಸಿ ತಂಡದ ಮುನ್ನಡೆ ಹೆಚ್ಚಿಸಿದರು.
27ನೇ ನಿಮಿಷದಲ್ಲಿ ಭಾರತಕ್ಕೆ ಸತತ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಅದರ ಲಾಭ ಪಡೆಯುವಲ್ಲಿ ತಂಡ ಎಡವಿತು. ಮೂರನೇ ಕ್ವಾರ್ಟರ್‌ನಲ್ಲಿ ದಿಲ್‌ಪ್ರೀತ್ ಅವರು ಫೀಲ್ಡ್ ಗೋಲು ಗಳಿಸಿ ಭಾರತದ ಹಿನ್ನಡೆಯನ್ನು ಕೊಂಚ ತಗ್ಗಿಸಿದರು.
ಕೊನೆಯ 10 ನಿಮಿಷಗಳಲ್ಲಿ ಎದುರಾಳಿ ತಂಡವು ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಭಾರತದ ಗೋಲ್‌ಕೀಪರ್ ಕೃಷ್ಣ ಬಹದ್ದೂರ್ ಪಾಠಕ್ ಅದನ್ನು ಯಶಸ್ವಿಯಾಗಿ ತಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.