ಭಾರತ ಮತ್ತು ಜರ್ಮನಿ ಆಟಗಾರರ ನಡುವೆ ಪೈಪೋಟಿ
–ಎಕ್ಸ್ ಚಿತ್ರ
ಲಂಡನ್: ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಲಂಡನ್ ಲೆಗ್‌ನಲ್ಲಿ ಶನಿವಾರ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು 3–0 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿತು.
ಡ್ರ್ಯಾಗ್ ಫ್ಲಿಕರ್ ಹರ್ಮನ್ ಪ್ರೀತ್ (16ನೇ ನಿಮಿಷ), ಸುಖಜೀತ್ ಸಿಂಗ್ (41ನೇ ನಿಮಿಷ) ಮತ್ತು ಗುರ್ಜಂತ್ ಸಿಂಗ್ (44ನೇ ನಿಮಿಷ) ಗೋಲು ಗಳಿಸಿದರು.
13 ಪಂದ್ಯಗಳಿಂದ 24 ಅಂಕ ಗಳಿಸಿರುವ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ 14 ಪಂದ್ಯಗಳಿಂದ 26 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 12 ಪಂದ್ಯಗಳಿಂದ 26 ಅಂಕ ಗಳಿಸಿರುವ ನೆದರ್ಲೆಂಡ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರು ಜರ್ಮನಿಯ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ವಿಫಲಗೊಳಿಸಿದರು. ಎರಡನೇ ಕ್ವಾರ್ಟರ್‌ನ ಮೊದಲ ನಿಮಿಷದಲ್ಲಿ ಹರ್ಮನ್‌ಪ್ರೀತ್, ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು.
ನಂತರ ಸುಖಜೀತ್ 41ನೇ ನಿಮಿಷದಲ್ಲಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಜರ್ಮನ್ ಗೋಲ್ ಕೀಪರ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪಟ್ಟಿಗೆಗೆ ಸೇರಿಸಿದರು. ಮೂರು ನಿಮಿಷಗಳ ನಂತರ ಗುರ್ಜಂತ್ ಅಮೋಘ ರೀತಿ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3–0 ಗೆ ವಿಸ್ತರಿಸಿದರು.
ವೇಗದ ಪಾಸಿಂಗ್ ಮತ್ತು ಕೌಶಲದ ಆಟದಿಂದ ಭಾರತ, ಜರ್ಮನಿ ತಂಡದ ರಕ್ಷಣಾ ವಿಭಾಗವನ್ನು ಗಲಿಬಿಲಿಗೊಳಿಸಿತು. ಜರ್ಮನಿಗೆ ಡಜನ್‌ಗೂ ಹೆಚ್ಚು ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ ವ್ಯರ್ಥವಾದವು. ಹಲವು ಬಾರಿ ಭಾರತ ಆಟಗಾರರು ರಕ್ಷಣಾ ಗೋಡೆ ಭೇದಿಸಿದರು. ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು.
ಭಾರತ ತಂಡ ಜೂನ್ 8ರಂದು ಜರ್ಮನಿ ವಿರುದ್ಧ ಸೆಣಸಲಿದೆ. ಜೂನ್ 2 ಮತ್ತು 9ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.