
ಇಪೊ: ಗೋಲುಗಳ ಮಳೆಗರೆದ ಭಾರತ ತಂಡ, ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿ ಲೀಗ್ ಪಂದ್ಯದಲ್ಲಿ ಶನಿವಾರ ಕೆನಡಾ ತಂಡವನ್ನು 14–3 ಗೋಲುಗಳಿಂದ ಸೋಲಿಸಿತು. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಭಾರತ ಫೈನಲ್ ಪ್ರವೇಶಿಸಿತು.
ಜುಗರಾಜ್ ಸಿಂಗ್ ನಾಲ್ಕು ಗೋಲುಗಳನ್ನು ಹೊಡೆದರು. ಕೊನೆಯ ಕ್ವಾರ್ಟರ್‌ನಲ್ಲೇ ಆರು ಗೋಲುಗಳು ದಾಖಲಾದವು.
ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಭಾರತ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ತಂಡಕ್ಕೆ ಮಣಿದಿತ್ತು. ನ್ಯೂಜಿಲೆಂಡ್ ವಿರುದ್ಧ ಹಿಂದಿನ ಪಂದ್ಯದಲ್ಲಿ 3–2 ಗೆಲುವು ಸೇರಿದಂತೆ ಉಳಿದ ಪಂದ್ಯಗಳಲ್ಲಿ ಭಾರತ ಜಯಗಳಿಸಿತ್ತು.
ಭಾರತ ತಂಡವು ಪ್ರಶಸ್ತಿಗಾಗಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಬೆಲ್ಜಿಯಂ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ.
ನೀಲಕಂಠ ಶರ್ಮಾ (4ನೇ ನಿಮಿಷ), ರಾಜಿಂದರ್ ಸಿಂಗ್, (10ನೇ, 24ನೇ), ಜುಗರಾಜ್ ಸಿಂಗ್ (12, 26, 39 ಮತ್ತು 50ನೇ ನಿಮಿಷ), ಅಮಿತ್ ರೋಹಿದಾಸ್ (15, 46ನೇ), ದಿಲ್‌ಪ್ರೀತ್ (25ನೇ ನಿಮಿಷ), ಸೆಲ್ವಂ ಕಾರ್ತಿ (43ನೇ ನಿಮಿಷ), ಸಂಜಯ್ (56ನೇ), ಅಭಿಷೇಕ್ (57, 59ನೇ ನಿಮಿಷ) ಅವರು ಭಾರತದ ಪರ ಗೋಲು ಗಳಿಸಿದರು.
ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಕೆನಡಾ ಪರ ಬ್ರೆಂಡರ್ ಗುರಾಲಿಕ್ (11ನೇ), ಮ್ಯಾಥ್ಯೂ ಸರ್ಮೆಂಟೊ (35ನೇ), ಜ್ಯೋತಿ ಸ್ವರೂಪ್ ಸಿಧು (53ನೇ ನಿಮಿಷ) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.