ನವದೆಹಲಿ: ಭಾರತವು ಈ ವರ್ಷದ ಚೆಸ್ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಲಿದೆ. ಅಕ್ಟೋಬರ್ 30 ರಿಂದ ನವೆಂಬರ್ 27ರವರೆಗೆ ನಿಗದಿಯಾಗಿರುವ ಈ ಟೂರ್ನಿಯ ನಡೆಯುವ ಸ್ಥಳವನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದು ವಿಶ್ವ ಚೆಸ್ ಸಂಸ್ಥೆಯಾದ ‘ಫಿಡೆ’ ಸೋಮವಾರ ಪ್ರಕಟಿಸಿದೆ.
ಈ ಟೂರ್ನಿಯಲ್ಲಿ 206 ಆಟಗಾರರು ಭಾಗವಹಿಸುತ್ತಿದ್ದು, ಪ್ರತಿಷ್ಠಿತ ಪ್ರಶಸ್ತಿಯ ಜೊತೆಗೆ ಮೊದಲ ಮೂರು ಸ್ಥಾನ ಪಡೆದವರು 2026ರ ಫಿಡೆ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ.
ಭಾರತ 2002ರಲ್ಲಿ ಕೊನೆಯ ಬಾರಿ ಚೆಸ್ ವಿಶ್ವಕಪ್‌ನ ಆತಿಥ್ಯ ವಹಿಸಿದ್ದಾಗ ಹೈದರಾಬಾದಿನಲ್ಲಿ ಟೂರ್ನಿ ನಡೆದಿತ್ತು. ವಿಶ್ವನಾಥನ್ ಆನಂದ್ ಆ ವರ್ಷ ಪ್ರಶಸ್ತಿ ಗೆದ್ದುಕೊಂಡಿದ್ದರು.
ಟೂರ್ನಿಯು ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಸೋಲುವ ಆಟಗಾರ ಹೊರಬೀಳಲಿದ್ದಾರೆ. ಟೂರ್ನಿಯ ವಿವಿಧ ಮಾದರಿಗಳಲ್ಲಿ ನಡೆದಿದ್ದು, 2021ರಿಂದ ಸಿಂಗಲ್ ಎಲಿಮಿನೇಷನ್ ಮಾದರಿ ಅನುಸರಿಲಾಗುತ್ತಿದೆ. ಪ್ರತಿಯೊಂದು ಸುತ್ತು ಮೂರು ದಿನ ನಡೆಯಲಿದ್ದು, ಎರಡು ದಿನ ಒಂದೊಂದು ಕ್ಲಾಸಿಕಲ್ ಮಾದರಿಯ ಪಂದ್ಯಗಳು ನಡೆಯಲಿವೆ. ಸ್ಕೋರ್ ಸಮನಾದ ಪಕ್ಷದಲ್ಲಿ ಮೂರನೇ ದಿನವನ್ನು ಟೈಬ್ರೇಕ್ ಪಂದ್ಯಗಳಿಗೆ ಮೀಸಲಿಡಲಾಗಿದೆ ಎಂದು ಫಿಡೆ ತಿಳಿಸಿದೆ.
ಅಗ್ರ 50 ಮಂದಿ ಆಟಗಾರರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಇಲ್ಲಿಂದ ಮೊದಲ ಮೂರು ಸ್ಥಾನ ಪಡೆದವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಿಯ ವಿಜೇತರು ವಿಶ್ವ ಚಾಂಪಿಯನ್‌ಗೆ ಚಾಲೆಂಜರ್ ಆಗಲಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, 2023ರ ರನ್ನರ್ ಅಪ್ ಪ್ರಜ್ಞಾನಂದ, ವಿಶ್ವದ ಐದನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ ಸೇರಿದಂತೆ ದೇಶದ ಅಗ್ರ ಆಟಗಾರರು ಕಣಕ್ಕಿಳಿಯುವರು. ಈ ಹಿಂದಿನ ಆವೃತ್ತಿಯ ಚಾಂಪಿಯನ್, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಸಹ ಕಣಕ್ಕಿಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.