ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಬಾಂಗ್ಲಾದೇಶ ಎದುರು ಭಾರತ ಜಯಭೇರಿ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಬಾಂಗ್ಲಾದೇಶ ಎದುರು ಎರಡು ಗೋಲು ಗಳಿಸಿದ ಜರ್ಮನ್‌ಪ್ರೀತ್

ಪಿಟಿಐ
Published 15 ಡಿಸೆಂಬರ್ 2021, 14:30 IST
Last Updated 15 ಡಿಸೆಂಬರ್ 2021, 14:30 IST
ಗೋಲು ಗಳಿಸಿ ಸಂಭ್ರಮಿಸಿದ ಭಾರತ ತಂಡದ ಆಟಗಾರರು –ಟ್ವಿಟರ್ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಭಾರತ ತಂಡದ ಆಟಗಾರರು –ಟ್ವಿಟರ್ ಚಿತ್ರ   

ಢಾಕಾ: ಮೊದಲ ಪಂದ್ಯದಲ್ಲಿ ಡ್ರಾಗೆ ಸಮಾಧಾನಗೊಂಡ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಬುಧವಾರ ನಡೆದ ಹಣಾಹಣಿಯಲ್ಲಿ ಭಾರತ 9–0ಯಿಂದ ಬಾಂಗ್ಲಾದೇಶವನ್ನು ಮಣಿಸಿತು.

ಹಾಲಿ ಚಾಂಪಿಯನ್ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಮೊದಲ ಪಂದ್ಯವನ್ನು ಕೊರಿಯಾ ಜೊತೆ 2–2ರಲ್ಲಿ ಡ್ರಾ ಮಾಡಿಕೊಂಡಿತ್ತು. ಬುಧವಾರದ ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಸ್ಟ್ರೈಕರ್ ದಿಲ್‌ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಮತ್ತು ಜರ್ಮನ್‌ಪ್ರೀತ್ ಗಳಿಸಿದ ಎರಡು ಗೋಲುಗಳು ಭಾರತ ತಂಡದ ಸುಲಭ ಜಯಕ್ಕೆ ಕಾರಣವಾದವು.

12ನೇ ನಿಮಿಷದಲ್ಲಿ ದಿಲ್‌ಪ್ರೀತ್‌ ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆ ಗಳಿಸಿತು. 22ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ದಿಪ್‌ಪ್ರೀತ್ ಮತ್ತೆರಡು ಗೋಲುಗಳನ್ನು ದಾಖಲಿಸಿದರು. 33 ಮತ್ತು 43ನೇ ನಿಮಿಷಗಳಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಜರ್ಮನ್‌ಪ್ರೀತ್ ಸಿಂಗ್ ಚೆಂಡನ್ನು ಗುರಿ ಸೇರಿಸಿದರು.

ADVERTISEMENT

ಇವರಿಬ್ಬರ ಆಟಕ್ಕೆ ಪೂರಕವಾಗಿ ಲಲಿತ್ ಉಪಾಧ್ಯಾಯ (28ನೇ ನಿ), ಆಕಾಶ್‌ದೀಪ್ ಸಿಂಗ್ (54ನೇ ನಿ), ಮನ್‌ದೀಪ್ ಮೊರ್ (55ನೇ ನಿ) ಮತ್ತು ಹರ್ಮನ್‌ಪ್ರೀತ್ ಸಿಂಗ್ (57ನೇ ನಿ) ಅವರು ಕೂಡ ಗೋಲು ಗಳಿಸಿದರು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್‌ ಸಿಂಗ್ ಅವರ ಫ್ಲಿಕ್‌ನಲ್ಲಿ ಲಭಿಸಿದ ಚೆಂಡನ್ನು ಲಲಿತ್ ಉಪಾಧ್ಯಾಯ ಗುರಿಮುಟ್ಟಿಸಿದರೆ ಮನ್‌ದೀಪ್ ಮೊರ್ ಚೊಚ್ಚಲ ಅಂತರರಾಷ್ಟ್ರೀಯ ಗೋಲಿನ ಸಂಭ್ರಮದಲ್ಲಿ ತೇಲಿದರು.

ಆಧಿಪತ್ಯ ಸ್ಥಾಪಿಸಿದ ಮನ್‌ಪ್ರೀತ್ ಬಳಗ

ಭಾರಿ ಅಂತರದ ಜಯ ಸಾಧಿಸಿದರೂ ಭಾರತ ತಂಡ ಕೆಲವು ಅವಕಾಶಗಳನ್ನು ಕೈಗೆಚೆಲ್ಲಿತು. ಕಾದು ನೋಡುವ ತಂತ್ರಕ್ಕೆ ಒತ್ತು ನೀಡಿದ ಬಾಂಗ್ಲಾದೇಶ ಕೆಲವು ಸಂದರ್ಭಗಳಲ್ಲಿ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಯಿತು. ‘ಸೆಟ್‌ಪೀಸ್‌’ ಸಂದರ್ಭದಲ್ಲಿ ಗೋಲ್‌ಕೀಪರ್ ಅಬು ನಿಪಾನ್ ಅಮೋಘ ಸಾಮರ್ಥ್ಯ ಪ್ರದರ್ಶಿಸಿದರು. ಮೊದಲ 12 ನಿಮಿಷಗಳಲ್ಲಿ 8 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದ ಭಾರತಕ್ಕೆ ಎದುರಾಳಿ ತಂಡದ ರಕ್ಷಣಾ ಗೋಡೆ ಕೆಡವಲು ಸಾಧ್ಯವಾಗಲಿಲ್ಲ.

ಬಾಂಗ್ಲಾದೇಶ ನಾಯಕ ಅಶ್ರಫುಲ್ ಇಸ್ಲಾಂ ತಮ್ಮದೇ ತಂಡದ ಗೋಲು ಆವರಣದಲ್ಲಿ ಪ್ರಮಾದ ಎಸಗಿ ಭಾರತಕ್ಕೆ ಫ್ರೀ ಹಿಟ್ ಅವಕಾಶ ಕೊಟ್ಟರು. ಸುಮಿತ್ ವಾಲ್ಮೀಕಿ ಅವರು ಚಾಣಾಕ್ಷತನ ಮೆರೆದು ದಿಲ್‌ಪ್ರೀತ್‌ ಬಳಿಗೆ ಚೆಂಡನ್ನು ಅಟ್ಟಿದರು. ದಿಲ್‌ಪ್ರೀತ್‌ ಮೋಹಕವಾಗಿ ಗೋಲುಪೆಟ್ಟಿಗೆಯ ಒಳಗೆ ಅಟ್ಟಿದರು. ನಂತರ ಭಾರತ ಹಿಡಿತ ಬಿಗಿಗೊಳಿಸುತ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.