ADVERTISEMENT

ಮಹಿಳೆಯರ ಏಷ್ಯಾ ಕಪ್‌ ಹಾಕಿ ಟೂರ್ನಿ ಫೈನಲ್‌: ಪ್ರಶಸ್ತಿಗೆ ಭಾರತ, ಚೀನಾ ಸೆಣಸಾಟ

ಪಿಟಿಐ
Published 13 ಸೆಪ್ಟೆಂಬರ್ 2025, 23:30 IST
Last Updated 13 ಸೆಪ್ಟೆಂಬರ್ 2025, 23:30 IST
<div class="paragraphs"><p>ಚೆಂಡಿನ ಮೇಲೆ ಹಿಡಿತ ಸಾಧಿಸಲು ಭಾರತ (ಬಲ) ಮತ್ತು ಜಪಾನ್‌ ಆಟಗಾರ್ತಿಯರು ಪ್ರಯತ್ನಿಸಿದರು </p></div>

ಚೆಂಡಿನ ಮೇಲೆ ಹಿಡಿತ ಸಾಧಿಸಲು ಭಾರತ (ಬಲ) ಮತ್ತು ಜಪಾನ್‌ ಆಟಗಾರ್ತಿಯರು ಪ್ರಯತ್ನಿಸಿದರು

   

ಎಕ್ಸ್‌ ಚಿತ್ರ

ಹಾಂಗ್‌ಝೌ (ಚೀನಾ): ಭಾರತ ಮತ್ತು ಚೀನಾ ತಂಡವು ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಪ್ರಶಸ್ತಿ ಗೆದ್ದ ತಂಡವು ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.

ADVERTISEMENT

ಶನಿವಾರ ನಡೆದ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಭಾರತದ ವನಿತೆಯರು 1–1 ಗೋಲುಗಳಿಂದ ಹಾಲಿ ಚಾಂಪಿಯನ್‌ ಜಪಾನ್‌ ವಿರುದ್ಧ ಡ್ರಾ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ಚೀನಾ ತಂಡವು 1–0 ಯಿಂದ ದಕ್ಷಿಣ ಕೊರಿಯಾ ವಿರುದ್ಧ ಗೆಲುವು ಸಾಧಿಸಿತು.

ಸೂಪರ್‌ ಫೋರ್‌ ಹಂತದಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದ ಚೀನಾ ಮತ್ತು ಭಾರತ ತಂಡಗಳು ಪ್ರಶಸ್ತಿ ಸುತ್ತಿಗೆ ಮುನ್ನಡೆದವು. ಬಲಿಷ್ಠ ಚೀನಾ ತಂಡವು ಸೂಪರ್‌ ಫೋರ್‌ ಹಂತದ ಮೂರು ಪಂದ್ಯಗಳನ್ನು ಗೆದ್ದು, 9 ಅಂಕ ಕಲೆ ಹಾಕಿತು. ಭಾರತ ತಂಡವು ಒಂದು ಗೆಲುವು, ಒಂದು ಡ್ರಾ, ಮತ್ತೊಂದು ಸೋಲಿನೊಂದಿಗೆ 4 ಅಂಕ ಗಳಿಸಿತು. ಜಪಾನ್‌ (2 ಅಂಕ) ಮತ್ತು ಕೊರಿಯಾ (1 ಅಂಕ) ತಂಡಗಳು ಮೂರನೇ ಸ್ಥಾನಕ್ಕಾಗಿ ಸೆಣಸಾಡಲಿವೆ. 

ಚೀನಾ ತಂಡವು ಈ ಮೊದಲೇ ಫೈನಲ್‌ಗೆ ಸ್ಥಾನ ಕಾಯ್ದಿರಿಸಿತ್ತು. ಆದರೆ, ಮತ್ತೊಂದು ಸ್ಥಾನಕ್ಕಾಗಿ ಉಳಿದ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಫೈನಲ್‌ಗೆ ಅರ್ಹತೆ ಪಡೆಯಲು ಕೊರಿಯಾ ತಂಡವು ಚೀನಾ ವಿರುದ್ಧ ಕನಿಷ್ಠ ಎರಡು ಗೋಲುಗಳ ಅಂತರದಿಂದ ಗೆಲ್ಲಬೇಕಾಗಿತ್ತು. ಅದರಲ್ಲಿ ಚೀನಾ ಗೆದ್ದ ಕಾರಣ ಭಾರತಕ್ಕೆ ಅವಕಾಶದ ಬಾಗಿಲು ತೆರೆಯಿತು. 2022ರ ಆವೃತ್ತಿಯಲ್ಲಿ ಭಾರತ ಮೂರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. 

ಜಪಾನ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಬ್ಯೂಟಿ ಬ್ಯೂಟಿ ಡಂಗ್‌ ಡಂಗ್‌ (7ನೇ ನಿಮಿಷ) ಗೋಲು ದಾಖಲಿಸಿದರು. ಜಪಾನ್‌ ಪರ ಕೊಬಯಕಾವಾ ಶಿಹೊ (58ನೇ) ಗೋಲು ಗಳಿಸಿದರು. ಗುಂಪು ಹಂತದಲ್ಲಿಯೂ ಭಾರತ ಮತ್ತು ಜಪಾನ್‌ ನಡುವಣ ಪಂದ್ಯ 2–2ರಿಂದ ಡ್ರಾ ಆಗಿತ್ತು. 

ಸೂಪರ್‌ ಫೋರ್‌ ಹಂತದಲ್ಲಿ ಚೀನಾ ವಿರುದ್ಧ ಭಾರತ ತಂಡವು 1–4 ಗೋಲುಗಳ ಅಂತರದಿಂದ ಸೋಲು ಅನುಭವಿಸಿತ್ತು. ಸಲೀಮಾ ಟೆಟೆ ಬಳಗವು ಫೈನಲ್‌ನಲ್ಲಿ ಪಾರಮ್ಯ ಮೆರೆದು, ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.