ADVERTISEMENT

ಟ್ರಿಪಲ್‌ ಜಂಪ್‌ ಚಿನ್ನ, ಬೆಳ್ಳಿ ಭಾರತಕ್ಕೆ

ಅಥ್ಲೆಟಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ; ಎಲ್ದೋಸ್‌, ಅಬೂಬಕರ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 15:31 IST
Last Updated 7 ಆಗಸ್ಟ್ 2022, 15:31 IST
ಎಲ್ದೋಸ್‌ ಪೌಲ್‌ ಅವರು ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಪಾಲ್ಗೊಂಡರು –ಎಎಫ್‌ಪಿ ಚಿತ್ರ
ಎಲ್ದೋಸ್‌ ಪೌಲ್‌ ಅವರು ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಪಾಲ್ಗೊಂಡರು –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್ (ಪಿಟಿಐ): ಭಾರತದ ಅಥ್ಲೆಟಿಕ್ಸ್‌ಗೆ ಭಾನುವಾರ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು. ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್‌ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಎಲ್ದೋಸ್‌ ಪೌಲ್‌ ಮತ್ತು ಅಬ್ದುಲ್ಲಾ ಅಬೂಬಕರ್‌ ಅವರು ಟ್ರಿಪಲ್‌ ಜಂಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು.

ಈ ಹಿಂದಿನ ಕೂಟಗಳಲ್ಲಿ ಭಾರತ ಟ್ರಿಪಲ್‌ ಜಂಪ್‌ನಲ್ಲಿ ನಾಲ್ಕು ಪದಕ ಜಯಿಸಿತ್ತು. ಆದರೆ ಭಾರತದ ಇಬ್ಬರು ಅಥ್ಲೀಟ್‌ಗಳು ಮೊದಲ ಎರಡೂ ಸ್ಥಾನಗಳನ್ನು ಪಡೆದುಕೊಂಡದ್ದು ಇದೇ ಮೊದಲು.

ಭಾನುವಾರ ಇತರ ಸ್ಪರ್ಧೆಗಳಲ್ಲಿ ಎರಡು ಕಂಚುಗಳನ್ನು ಬಗಲಿಗೆ ಹಾಕಿಕೊಂಡ ಭಾರತದ ಅಥ್ಲೀಟ್‌ಗಳು, ಟ್ರ್ಯಾಕ್‌ ಮತ್ತು ಫೀಲ್ಡ್‌ ಸ್ಪರ್ಧೆಯಲ್ಲಿ ಒಂದೇ ದಿನ ನಾಲ್ಕು ಪದಕ ಗೆದ್ದ ಸಾಧನೆ ಮಾಡಿದರು.

ADVERTISEMENT

ಎಲ್ದೋಸ್‌ ತಮ್ಮ ಮೂರನೇ ಪ್ರಯತ್ನದಲ್ಲಿ 17.03 ಮೀ. ಸಾಧನೆಯೊಂದಿಗೆ ಅಗ್ರಸ್ಥಾನ ಪಡೆದರೆ, ಅಬೂಬಕರ್‌ 17.02 ಮೀ. ದೂರ ಜಿಗಿದು ಎರಡನೇ ಸ್ಥಾನ ಗಳಿಸಿದರು. ಅವರು ಐದನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು. ಬರ್ಮುಡಾ ದೇಶದ ಜಾ–ನಲ್ ಪೆರಿನ್‌ಚಿಫ್‌ (16.92 ಮೀ.) ಕಂಚು ಪಡೆದರು.

ಈ ಹಿಂದೆ ಮೊಹಿಂದರ್‌ ಸಿಂಗ್‌ ಗಿಲ್‌ ಅವರು 1970 ಮತ್ತು 1974 ರಲ್ಲಿ ಕ್ರಮವಾಗಿ ಕಂಚು ಹಾಗೂ ಬೆಳ್ಳಿ ಗೆದ್ದಿದ್ದರು. ರೆಂಜಿತ್‌ ಮಹೇಶ್ವರಿ ಹಾಗೂ ಅರ್ಪಿಂದರ್‌ ಸಿಂಗ್‌ ಅವರು 2010, 2014 ರಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ಅನುರಾಣಿಗೆ ಕಂಚು: ಅನುರಾಣಿ ಅವರು ಜಾವೆಲಿನ್‌ ಥ್ರೋನಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕಾಮನ್‌ವೆಲ್ತ್‌ ಕೂಟದ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ರಾಣಿ ಅವರು 60 ಮೀ. ಸಾಧನೆ ಮಾಡಿದರು. ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಈ ದೂರವನ್ನು ಕಂಡುಕೊಂಡರು. ವಿಶ್ವ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾದ ಕೆಲ್ಸಿ ಲೀ ಬಾರ್ಬೆರ್‌ (64.43) ಚಿನ್ನ ಹಾಗೂ ಅದೇ ದೇಶದ ಮೆಕೆಂಜಿ ಲಿಟ್ಲ್‌ (64.27 ಮೀ.) ಬೆಳ್ಳಿ ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ಭಾರತ ಈ ಹಿಂದೆ ಪದಕ ಜಯಿಸಿತ್ತು. ಕಾಶಿನಾಥ್‌ ನಾಯ್ಕ್‌ ಅವರು 2010ರ ಕೂಟದಲ್ಲಿ ಕಂಚು ಹಾಗೂ ನೀರಜ್‌ ಚೋಪ್ರಾ 2018ರ ಕೂಟದಲ್ಲಿ ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.