ADVERTISEMENT

ಒಲಿಂಪಿಕ್ಸ್‌: ಭಾರತ ಕ್ರೀಡಾಪಟುಗಳ ಅಭ್ಯಾಸ ಆರಂಭ

ಕಣಕ್ಕೆ ಇಳಿದ ಬ್ಯಾಡ್ಮಿಂಟನ್ ಪಟು ಸಿಂಧು, ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್, ಜಿಮ್ನಾಸ್ಟ್‌ ಪ‍್ರಣತಿ

ಪಿಟಿಐ
Published 19 ಜುಲೈ 2021, 11:41 IST
Last Updated 19 ಜುಲೈ 2021, 11:41 IST
ಪಿ.ವಿ.ಸಿಂಧು –ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು –ಎಎಫ್‌ಪಿ ಚಿತ್ರ   

ಟೋಕಿಯೊ: ಕೋವಿಡ್ ಆತಂಕದ ನಡುವೆಯೇ ಪದಕಗಳ ನಿರೀಕ್ಷೆಯೊಂದಿಗೆ ಭಾನುವಾರ ಕ್ರೀಡಾಗ್ರಾಮ ಪ್ರವೇಶಿಸಿರುವ ಭಾರತದ ಕ್ರೀಡಾಪಟುಗಳು ಸೋಮವಾರ ಒಲಿಂಪಿಕ್ಸ್‌ಗೆ ಪೂರ್ವಭಾವಿಯಾಗಿ ಅಭ್ಯಾಸ ಆರಂಭಿಸಿದ್ದಾರೆ.

ಬ್ಯಾಡ್ಮಿಂಟನ್ ಪಟುಗಳಾದ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್‌, ಆರ್ಚರ್‌ಗಳಾದ ದೀಪಿಕಾ ಕುಮಾರಿ, ಅತನು ದಾಸ್‌, ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಮತ್ತು ಜಿಮ್ನಾಸ್ಟ್‌ ಪ್ರಣತಿ ನಾಯಕ್ ತಾಲೀಮು ನಡೆಸಿದರು. ಶನಿವಾರ ರಾತ್ರಿ ನವದೆಹಲಿಯಿಂದ ಹೊರಟ ಭಾರತದ ಮೊದಲ ತಂಡ ಭಾನುವಾರ ಕೋವಿಡ್‌ ನಿಯಮಾವಳಿಗಳ ಪ್ರಕಾರ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಕ್ರೀಡಾ ಗ್ರಾಮ ಪ್ರವೇಶಿಸಿದ್ದರು.

ಬೆಳಿಗ್ಗೆ ಯುಮೆನೊಶಿಮಾ ಪಾರ್ಕ್‌ನಲ್ಲಿ ಅತನು ದಾಸ್ ಮತ್ತು ದೀಪಿಕಾ ಕುಮಾರಿ ತಮ್ಮ ನೈಪುಣ್ಯಗಳಿಗೆ ಸಾಣೆ ಹಿಡಿಯುವ ಕಾರ್ಯದಲ್ಲಿ ತೊಡಗಿದ್ದರು. ಶರತ್ ಕಮಲ್ ಮತ್ತು ಸತ್ಯನ್‌ ಟೇಬಲ್ ಮೇಲೆ ಚೆಂಡನ್ನು ಉರುಳಿಸಿ ರ‍್ಯಾಕೆಟ್ ಬೀಸಿದರು. ಭಾರತದಿಂದ ತೆರಳಿರುವ ಏಕೈಕ ಜಿಮ್ನಾಸ್ಟ್‌ ಪ್ರಣತಿ ಅವರು ಕೋಚ್‌ ಲಕ್ಷ್ಮಣ್ ಮನೋಹರ್ ಶರ್ಮಾ ಮಾರ್ಗದರ್ಶನದಲ್ಲಿ ಕಸರತ್ತು ನಡೆಸಿದರು.

ADVERTISEMENT

ಬ್ಯಾಡ್ಮಿಂಟನ್ ಸಿಂಗಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಲಿರುವ ಸಿಂಧು ಮತ್ತು ಪ್ರಣೀತ್ ಅವರು ಕೋಚ್ ಪಾರ್ಕ್ ಟೈ ಸ್ಯಾಂಗ್ ಜೊತೆ ಮತ್ತು ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ–ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಮಥಿಯಾಸ್ ಬೋಯೆ ಜೊತೆ ‘ಕೋರ್ಟ್‌’ಗೆ ತೆರಳಿದರು. ಸೇಲಿಂಗ್ ಪಟುಗಳು ಭಾನುವಾರವೇ ‘ನೀರಿಗೆ’ ಇಳಿದಿದ್ದಾರೆ.

ಟೋಕಿಯೊದ ಹೊರವಲಯದಲ್ಲಿರುವ ಸೀ ಫಾರೆಸ್ಟ್ ವಾಟರ್‌ವೇನಲ್ಲಿ ಕೋಚ್ ಇಸ್ಮಾಯಿಲ್ ಬೇಗ್ ಮಾರ್ಗದರ್ಶನದಲ್ಲಿ ರೋವಿಂಗ್ ಪಟುಗಳಾದ ಅರ್ಜುನ್ ಲಾಲ್ ಜಾಟಗ್ ಮತ್ತು ಅವರಿಂದ ಸಿಂಗ್ ಭಾನುವಾರ ಅಭ್ಯಾಸ ನಡೆಸಿದರು. 15 ಮಂದಿಯನ್ನೊಳಗೊಂಡ ಶೂಟರ್‌ಗಳು ಕೂಡ ಸೋಮವಾರ ಅಭ್ಯಾಸ ಆರಂಭಿಸಿದರು.

ಭಾರತದಿಂದ ಬರುವ ಕ್ರೀಡಾಪಟುಗಳು ಮೂರು ದಿನ ಕಡ್ಡಾಯ ಕ್ವಾರಂಟೈನ್‌ನಲ್ಲಿರಬೇಕು ಎಂದು ಆಯೋಜಕರು ಮೊದಲು ಸೂಚಿಸಿದ್ದರು. ನಂತರ ಈ ನಿರ್ಬಂಧವನ್ನು ಸಡಿಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.