ADVERTISEMENT

ಯುವ ಹಾಕಿ ತಂಡಕ್ಕೆ ಗ್ರಾಮೀಣ ಪ್ರತಿಭೆ

ತಲ್ಲೂರು ಗ್ರಾಮದ ಸುನೀಲ್‌ ಡಿಫೆಂಡರ್ ಆಗಿ ಆಯ್ಕೆ

ರವಿ ಆರ್.ತಿಮ್ಮಾಪುರ
Published 18 ಜೂನ್ 2025, 4:58 IST
Last Updated 18 ಜೂನ್ 2025, 4:58 IST
   

ಆನವಟ್ಟಿ (ಶಿವಮೊಗ್ಗ): ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದ ಪ್ರತಿಭಾನ್ವಿತ ಆಟಗಾರ ಪಿ.ಬಿ. ಸುನೀಲ್‌ ಅವರು 21 ವರ್ಷದೊಳಗಿನವರ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

20 ವರ್ಷ ವಯಸ್ಸಿನ ಸುನೀಲ್‌ ಆನವಟ್ಟಿ ಬಳಿಯ ತಲ್ಲೂರು ಗ್ರಾಮದ ಕೃಷಿಕ ಫಾಲಾಕ್ಷಪ್ಪ ಮತ್ತು ರತ್ನಮ್ಮ ಅವರ ಪುತ್ರ. ಅಣ್ಣನೊಂದಿಗೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಹುಡುಗ ಈಗ ಭಾರತ ಕಿರಿಯರ ಹಾಕಿ ತಂಡಕ್ಕೆ ಆಯ್ಕೆಯಾಗಿರು ವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ತಮಿಳುನಾಡಿನ ಚೆನ್ನೈ ಮತ್ತು ಮದುರೈನಲ್ಲಿ 2025ರ ನವೆಂಬರ್‌ 28ರಿಂದ ಡಿಸೆಂಬರ್‌ 10ರವರೆಗೆ ನಡೆಯ ಲಿರುವ ಎಫ್‌ಐಎಚ್‌ ಜೂನಿಯರ್ ಹಾಕಿ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುವ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಆಡಲಿದ್ದಾರೆ. ಅವರು ರಕ್ಷಣೆ ವಿಭಾಗದ ಆಟಗಾರನಾಗಿ ಆಡಲಿದ್ದಾರೆ. ಈ ಟೂರ್ನಿ ಇದೇ ತಿಂಗಳ 21 ರಿಂದ 25ರವರೆಗೆ ನಡೆಯಲಿದೆ.

ADVERTISEMENT

ತಲ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಸುನೀಲ್‌ ಅವರನ್ನು ತರಬೇತುದಾರ ಸುಂದರೇಶ್‌ ಅವರು 2016ರಲ್ಲಿ ಶಿವಮೊಗ್ಗದ ಕ್ರೀಡಾ ಹಾ‌ಸ್ಟೆಲ್‌ಗೆ ಸೇರಿಸಿ ಕೈಗೆ ಹಾಕಿ ಸ್ಟಿಕ್‌ ಕೊಟ್ಟಿದ್ದರು. ಸುಂದರೇಶ್‌ ಅವರ ನಿರೀಕ್ಷೆಯಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದ ಹಾಕಿ ಸ್ಪರ್ಧೆಗಳಲ್ಲಿ ಸುನೀಲ್‌ ಉತ್ತಮ ಆಟವಾಡಿದರು. ಕೊಡಗಿನ ಕ್ರೀಡಾಶಾಲೆ ಸೇರಿದಾಗ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಕಣ್ಣಿಗೆ ಬಿದ್ದ ಸುನೀಲ್‌, ಬೆಂಗಳೂರು ಸೇರಿದ ನಂತರ ಅವರ ಆಟದ ದಿಕ್ಕು ಬದಲಾಯಿತು.

ಕರ್ನಾಟಕ 19 ವರ್ಷದೊಳಗಿ ನವರ ತಂಡಕ್ಕೆ ಸುನೀಲ್‌ 2022ರಲ್ಲಿ ಆಯ್ಕೆಯಾದರು. 2024ರಲ್ಲಿ ತಂಡದ ನಾಯಕನಾಗಿ ಬಡ್ತಿ ಪಡೆದರು. 2025ರಲ್ಲಿ ಕರ್ನಾಟಕ ಸೀನಿಯರ್ ತಂಡಕ್ಕೆ ಆಯ್ಕೆಯಾಗಿ ಉತ್ತರಾಖಂಡ ದಲ್ಲಿ ನಡೆದ ರಾಷ್ಟ್ರೀಯ ಹಾಕಿ ಕ್ರೀಡಾ ಕೂಟದಲ್ಲಿ ಕರ್ನಾಟಕ ಚಾಂಪಿಯನ್‌ ಆಗಲು ಇವರ ಉತ್ತಮ ಪ್ರದರ್ಶನ ಕಾರಣವಾಗಿತ್ತು. ಈ ಪ್ರದರ್ಶನವೇ ಸುನೀಲ್‌ ಅವರನ್ನು ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಕರೆದೊಯ್ದಿದೆ.

ಕೋಚ್‌ ಸುಂದರೇಶ್‌ ಅವರು ಕ್ರೀಡಾ ಹಾಸ್ಟೆಲ್‌ಗೆ ಸೇರುವಂತೆ ಹೇಳಿದಾಗ ಬಡ ಕುಟುಂಬದಿಂದ ಬಂದ ನನಗೆ ಊಟ, ಬಟ್ಟೆ ಜೊತೆಗೆ ಶಿಕ್ಷಣ ಸಿಗುತ್ತದೆ ಎಂಬ ಕಾರಣದಿಂದ ಒಪ್ಪಿಕೊಂಡಿದ್ದೆ. ಶಿವಮೊಗ್ಗಕ್ಕೆ ಬಂದ ನಂತರ ಕೋಚ್‌ಗಳಾದ ಸುಂದರೇಶ್‌, ಬಿ.ಜಿ. ಅಂಕಿತಾ, ಕೆ.ವಿ. ಅರಸನ್‌, ಹರಿಹರನ್‌ ಅವರು ನನ್ನ ಪ್ರತಿಭೆಯನ್ನು ಗುರುತಿಸಿ, ತರಬೇತಿ ನೀಡಿ, ಆಟಗಾರನನ್ನಾಗಿ ರೂಪಿಸಿದರು. ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ದೊಡ್ಡ ಕನಸು ಹೊಂದಿದ್ದೇನೆ.

ಪಿ.ಬಿ.ಸುನೀಲ್‌, ಭಾರತ ಯುವ ಹಾಕಿ ತಂಡದ ಆಟಗಾರ

ಸುನೀಲ್‌ ಅವರ ಚುರುಕುತನ, ಚಾಕಚಕ್ಯತೆ ಹಾಗೂ ಕೌಶಶಲ್ಯವನ್ನು ನೋಡಿ ಭಾರತ ಯುವ ತಂಡಕ್ಕೆ ಆಯ್ಕೆ ಮಾಡಲಾಗಿದೆಆರ್‌.
ಸುಂದರೇಶ್‌, ಶಿವಮೊಗ್ಗ ಸ್ಪೋರ್ಟ್ಸ್ ಸ್ಕೂಲ್ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.