ADVERTISEMENT

ಹಾಕಿ ಫೈವ್ಸ್‌ ರ್‍ಯಾಂಕ್‌: ಎರಡನೇ ಸ್ಥಾನದಲ್ಲಿ ಭಾರತ ತಂಡಗಳು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 4:14 IST
Last Updated 21 ಮಾರ್ಚ್ 2024, 4:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲೂಸಾನ್: ಭಾರತ ಪುರುಷರ ಮತ್ತು ಮಹಿಳೆಯರ ಹಾಕಿ ಫೈವ್ಸ್‌ ತಂಡಗಳು ಎಫ್‌ಐಎಚ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿವೆ.

ತಲಾ 1400 ಪಾಯಿಂಟ್ಸ್‌ನೊಂದಿಗೆ ಭಾರತ ಪುರುಷರ ತಂಡವು ಒಮಾನ್ ಮತ್ತು ಮಲೇಷ್ಯಾದೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಹಂಚಿಕೊಂಡಿದೆ. ಏಷ್ಯನ್ ಚಾಂಪಿಯನ್‌ಷಿಪ್‌ ಪ್ರಶಸ್ತಿ ಗೆದ್ದ ಭಾರತ ಪುರುಷರ ತಂಡವು ಜನವರಿಯಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಐದನೇ ಸ್ಥಾನ ಗಳಿಸಿತ್ತು.

ತವರಿನ ನಡೆದ ವಿಶ್ವಕಪ್‌ನಲ್ಲಿ ಒಮಾನ್‌ ತಂಡವು ಕಂಚಿನ ಪದಕ ಗೆದ್ದಿತ್ತು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಮಲೇಷ್ಯಾ ತಂಡವು ವಿಶ್ವಕಪ್ ರನ್ನರ್ ಅಪ್ ಸ್ಥಾನ ಪಡೆದಿತ್ತು.

ADVERTISEMENT

ನೆದರ್ಲೆಂಡ್ಸ್‌ ತಂಡವು 1750 ಪಾಯಿಂಟ್ಸ್‌ನೊಂದಿಗೆ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಡಚ್‌ ತಂಡವು, ಚೊಚ್ಚಲ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿತ್ತು. ಪೋಲೆಂಡ್‌ ಮತ್ತು ಈಜಿಪ್ಟ್‌ ತಂಡಗಳು ತಲಾ 1350 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಹಂಚಿಕೊಂಡಿವೆ.

ಮಹಿಳಾ ವಿಭಾಗದಲ್ಲೂ ನೆದರ್ಲೆಂಡ್ಸ್‌ ತಂಡವು (1750 ಪಾಯಿಂಟ್ಸ್‌) ಅಗ್ರಸ್ಥಾನ ಪಡೆದಿವೆ. ಈ ತಂಡವೂ ವಿಶ್ವಕಪ್‌ ಮತ್ತು ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದಿತ್ತು.

ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡವು 1550 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ ಪೋಲೆಂಡ್‌ (1450) ಮೂರನೇ ಸ್ಥಾನ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.