ADVERTISEMENT

ಟಿಟಿ ಏಷ್ಯನ್ ಚಾಂಪಿಯನ್‌ಷಿಪ್‌: ಭಾರತ ಪುರುಷರ ತಂಡಕ್ಕೆ ‍ಪದಕ ಖಚಿತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 16:08 IST
Last Updated 4 ಸೆಪ್ಟೆಂಬರ್ 2023, 16:08 IST
<div class="paragraphs"><p>ಗೆಲುವಿನ ಸಂಭ್ರಮದಲ್ಲಿ ಭಾರತ ಪುರುಷರ ತಂಡದ ಆಟಗಾರರು –ಸಾಯ್‌ ಮೀಡಿಯಾ </p></div>

ಗೆಲುವಿನ ಸಂಭ್ರಮದಲ್ಲಿ ಭಾರತ ಪುರುಷರ ತಂಡದ ಆಟಗಾರರು –ಸಾಯ್‌ ಮೀಡಿಯಾ

   

‘ಎಕ್ಸ್‌’ ಚಿತ್ರ

ಪ್ಯೊಂಗ್‌ಚಾಂಗ್, ದಕ್ಷಿಣ ಕೊರಿಯಾ: ಭಾರತದ ಪುರುಷರ ಟೇಬಲ್ ಟೆನಿಸ್ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ 3–0ಯಿಂದ ಸಿಂಗಾಪುರ ತಂಡವನ್ನು ಮಣಿಸಿ, ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಕಂಚಿನ ಪದಕ ಖಚಿತಪಡಿಸಿಕೊಂಡಿದೆ.

ADVERTISEMENT

ಸೋಮವಾರ ನಡೆದ ಮೊದಲ ಸಿಂಗಲ್ಸ್‌ನಲ್ಲಿ ಭಾರತದ ಅನುಭವಿ ಆಟಗಾರ ಶರತ್ ಕಮಲ್ ಅವರು 11-1, 10-12, 11-8, 11-13, 14-12 ರಿಂದ ಇಜಾಕ್ ಕ್ವೆಕ್ ವಿರುದ್ಧ ಗೆದ್ದರು.

ಭಾರತದ ಮತ್ತೊಬ್ಬ ಆಟಗಾರ ಜಿ. ಸತ್ಯನ್ 11-6, 11-8, 12-10ರಿಂದ ಯೂ ಎನ್ ಕೋಯೆನ್ ಪಾಂಗ್ ಅವರನ್ನು ಸೋಲಿಸಿ, ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಮೂರನೇ ಪಂದ್ಯದಲ್ಲಿ ಹರ್ಮೀತ್‌ ದೇಸಾಯಿ 11-9, 11-4, 11-6ರಿಂದ ಝೆ ಯು ಕ್ಲಾರೆನ್ಸ್ ಚೆವ್ ಅವರನ್ನು ಮಣಿಸಿದರು.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಸೋತ ತಂಡಗಳಿಗೆ ಕಂಚಿನ ಪದಕ ನೀಡಲಾಗುತ್ತಿದ್ದು, ಹೀಗಾಗಿ ಭಾರತಕ್ಕೆ ಪದಕ ಖಚಿತಗೊಂಡಿದೆ.

ಮೂರನೇ ಶ್ರೇಯಾಂಕದ ಭಾರತ ತಂಡವು ಸೆಮಿಫೈನಲ್‌ನಲ್ಲಿ ಇರಾನ್ ಅಥವಾ ಚೀನಾ ತೈಪೆಯನ್ನು ಎದುರಿಸಲಿದೆ. ಎರಡು ವರ್ಷಗಳ ಹಿಂದೆ ದೋಹಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷರ ತಂಡ ಕಂಚು ಗೆದ್ದಿತ್ತು.

ಮಹಿಳೆಯರ ತಂಡಕ್ಕೆ ಸೋಲು: ಭಾರತದ ಮಹಿಳೆಯರ ತಂಡವು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 0–3ರಿಂದ ಜಪಾನ್ ವಿರುದ್ಧ ನಿರಾಸೆ ಅನುಭವಿಸಿತು.

ಆರಂಭಿಕ ಸಿಂಗಲ್ಸ್‌ನಲ್ಲಿ ಅಹಿಕಾ ಮುಖರ್ಜಿ 7–11, 13–15, 8–11 ರಿಂದ ವಿಶ್ವದ ಎಂಟನೇ ಕ್ರಮಾಂಕದ ಮಿಮಾ ಇಟೊ ಅವರಿಗೆ ಮಣಿದರು. ಮಣಿಕಾ ಬಾತ್ರಾ 7-11, 9-11, 11-9, 3-11 ರಿಂದ ಏಳನೇ ಕ್ರಮಾಂಕದ ಹಿನಾ ಹಯಾತಾ ಎದುರು ಪರಾಭವಗೊಂಡರು. ಸುತೀರ್ಥಾ ಮುಖರ್ಜಿ11–7, 4–11, 6–11, 5–11 ರಿಂದ ಮಿಯು ಹಿರಾನೊ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.