ADVERTISEMENT

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌: ಏಷ್ಯನ್ ದಾಖಲೆ ಬರೆದ ಭಾರತ ರಿಲೇ ತಂಡ

20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌

ಪಿಟಿಐ
Published 2 ಆಗಸ್ಟ್ 2022, 12:46 IST
Last Updated 2 ಆಗಸ್ಟ್ 2022, 12:46 IST
ಪ್ರಿಯಾ ಮೋಹನ್‌
ಪ್ರಿಯಾ ಮೋಹನ್‌   

ಕ್ಯಾಲಿ, ಕೊಲಂಬಿಯಾ: ಕರ್ನಾಟಕದಪ್ರಿಯಾ ಮೋಹನ್ ಅವರನ್ನೊಳಗೊಂಡ ಭಾರತ4X400 ಮಿಟರ್ಸ್ ಮಿಶ್ರ ರಿಲೇ ತಂಡವು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಏಷ್ಯನ್‌ ಜೂನಿಯರ್ ದಾಖಲೆ ಬರೆದಿದೆ. ಇದರೊಂದಿಗೆ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇಲ್ಲಿ ನಡೆಯುತ್ತಿರುವ ಕೂಟದ ಮೂರನೇ ಹೀಟ್‌ನಲ್ಲಿ ಸೋಮವಾರ ಪ್ರಿಯಾ, ಭರತ್ ಶ್ರೀಧರ್, ರೂಪಾಲ್‌ ಚೌಧರಿ ಮತ್ತು ಕಪಿಲ್ ಅವರಿದ್ದ ತಂಡವು 3 ನಿಮಿಷ 19.62 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಒಟ್ಟಾರೆ ಹೀಟ್ಸ್‌ನಲ್ಲಿ ಎರಡನೇ ಸ್ಥಾನ ಗಳಿಸಿತು.

ಅಮೆರಿಕ ತಂಡವು ಎರಡನೇ ಹೀಟ್‌ನಲ್ಲಿ ಕೂಟ ದಾಖಲೆಯ ಸಮಯದೊಂದಿಗೆ (3 ನಿ.18.65 ಸೆ.) ಅಗ್ರಸ್ಥಾನ ಗಳಿಸಿತು. ಫೈನಲ್‌ ಬುಧವಾರ ನಸುಕಿನ ಜಾವ 3.20ಕ್ಕೆ (ಭಾರತೀಯ ಕಾಲಮಾನ) ಆರಂಭವಾಗಲಿದೆ.

ADVERTISEMENT

ನೈರೋಬಿಯಲ್ಲಿ ನಡೆದ ಕಳೆದ ಆವೃತ್ತಿಯ ಕೂಟದಲ್ಲಿ ಭಾರತ 4X400 ಮೀ. ರಿಲೇ ತಂಡವು ಕಂಚು ಗೆದ್ದಿತ್ತು.

ಆಶಾಕಿರಣ್ ಮಿಂಚು: 15 ವರ್ಷದ ಆಶಾಕಿರಣ್‌ ಬರ್ಲಾ ಅವರು ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಸೆಮಿಫೈನಲ್ಸ್ ತಲುಪಿದರು. ಹೀಟ್‌ನಲ್ಲಿ ಅವರು 2 ನಿ. 9.01ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಆರನೇ ಸ್ಥಾನ ಗಳಿಸಿದರು. ಶಾಟ್‌ಪಟ್‌ನಲ್ಲಿ ಸನ್ಯಾಮ್‌ ಸಂಜಯ್ 18.36 ಮೀ. ಸಾಧನೆ ಮಾಡಿದರು. ಆದರೆ ಕೇವಲ 0.01ಮೀಟರ್‌ ಅಂತರದಲ್ಲಿ ಫೈನಲ್‌ ಅರ್ಹತೆ ಕಳೆದುಕೊಂಡರು.

ಅಮನ್‌ ಖೋಕರ್‌ 100 ಮೀ. ಓಟದ ಸೆಮಿಫೈನಲ್‌ ತಲುಪಲು ವಿಫಲರಾದರು. ಹೀಟ್‌ನಲ್ಲಿ 10.84 ಸೆ.ದಾಖಲಿಸಿದ ಅವರು ಒಟ್ಟಾರೆ 48ನೇ ಸ್ಥಾನ ಗಳಿಸಿದರು. 1,500 ಮೀ. ವಿಭಾಗದಲ್ಲಿ ಅರ್ಜುನ್‌ ವಾಸ್ಕಲೆ 3 ನಿ. 51.10 ಸೆಕೆಂಡುಗಳಲ್ಲಿ ಗುರಿ ತಲುಪಿ 26ನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.