ADVERTISEMENT

Pv Web Exclusive | ಕೊರೊನಾ ಕಾಲಘಟ್ಟದಲ್ಲಿ ಚೆಸ್‌ ಬೆಳ್ಳಿರೇಖೆ

ಅನುಭವಿಗಳ ಜೊತೆಗೆ ಕಿರಿಯರ ‘ಹವಾ’

ನಾಗೇಶ್ ಶೆಣೈ ಪಿ.
Published 6 ನವೆಂಬರ್ 2020, 13:18 IST
Last Updated 6 ನವೆಂಬರ್ 2020, 13:18 IST
ನಿಹಾಲ್‌ ಸರೀನ್‌
ನಿಹಾಲ್‌ ಸರೀನ್‌   

ಕೋವಿಡ್‌ ಸಾಂಕ್ರಾಮಿಕ ಪಿಡುಗಿನಿಂದ ಈ ವರ್ಷ ಕ್ರೀಡಾ ಚಟುವಟಿಕೆಗಳೆಲ್ಲಾ ಏರುಪೇರಾದವು. ಜೂನ್‌ಗೆ ಮೊದಲೇ, ಈ ವರ್ಷ ನಿಗದಿಯಾಗಿದ್ದ ಪ್ರಮುಖ ಕ್ರೀಡಾ ಚಟುವಟಿಕೆಗಳು ಮುಂದಿನ ವರ್ಷಕ್ಕೆ ಹೋದವು. ಕೆಲವು ರದ್ದಾದವು. ಲಾಕ್‌ಡೌನ್‌ನಿಂದಾಗಿ ಕ್ರೀಡಾಪಟುಗಳು ಬೇಸಿಗೆ ಅವಧಿಯುದ್ದಕ್ಕೂ ಮನೆಗೇ ಸೀಮಿತಗೊಂಡರು.

ಕೊರೊನಾ ಭೀತಿಯ ನಡುವೆಯೂ ಬೆಳ್ಳಿರೇಖೆಯಂತೆ ಕಾಣಿಸಿಕೊಂಡಿದ್ದು, ಚೆಸ್‌ನಲ್ಲಿ ಭಾರತದ ಆಟಗಾರರ ಸಾಧನೆ. ಸೋಂಕು ಭಯದಿಂದಾಗಿ ಈ ವರ್ಷದ ಟೂರ್ನಿಗಳೆಲ್ಲಾ ಆನ್‌ಲೈನ್‌ನಲ್ಲಿ ನಡೆದವು. ಇವುಗಳಲ್ಲಿ ಪ್ರಮುಖ ಟೂರ್ನಿಗಳಲ್ಲಿ ಭಾರತದ ಆಟಗಾರರಿಂದ ಉತ್ತಮ ನಿರ್ವಹಣೆ ಮೂಡಿಬಂತು. ಭಾರತದ ಚೆಸ್‌ ಭವಿಷ್ಯ ಭದ್ರವಾಗಿದೆ ಎಂಬ ಭರವಸೆಯನ್ನೂ ಮೂಡಿಸಿದ್ದಾರೆ.

ಲಾಕ್‌ಡೌನ್‌ ವೇಳೆ ನಡೆದ ಮೊದಲ ಪ್ರಮುಖ ಟೂರ್ನಿಯಾದ ನೇಷನ್ಸ್ ಕಪ್‌ ಟೂರ್ನಿಯಲ್ಲಿ ಭಾರತದ ಪ್ರದರ್ಶನ ನಿರಾಶಾದಾಯಕ. ಆದರೆ ಅದನ್ನು ಮರೆಮಾಚುವಂತೆ, ಎರಡು ವರ್ಷಗಳಿಗೊಮ್ಮೆ ನಡೆಯುವ ಚೆಸ್‌ ಒಲಿಂಪಿಯಾಡ್‌ನಲ್ಲಿ ರಷ್ಯದ ಜೊತೆ ಭಾರತ ಜಂಟಿಯಾಗಿ ಚಾಂಪಿಯನ್‌ ಆಯಿತು. ವಿಶ್ವನಾಥನ್‌ ಆನಂದ್‌ ಸೇರಿದಂತೆ ಪ್ರತಿಭಾನ್ವಿತ ಆಟಗಾರರು ಈ ಹಿಂದೆ ಒಲಿಂಪಿಯಾಡ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದರೂ ಈ ಪ್ರಶಸ್ತಿ ಗೆದ್ದುಕೊಳ್ಳಲು ಆಗಿರಲಿಲ್ಲ. ಐದನೇ ಸ್ಥಾನಕ್ಕೇರಿದ್ದು ತಂಡದ ಇದುವರೆಗಿನ ಉತ್ತಮ ಸಾಧನೆ ಆಗಿತ್ತು.

ADVERTISEMENT

ಉದಯೋನ್ಮುಖ ಆಟಗಾರ, ಗ್ರ್ಯಾಂಡ್‌ಮಾಸ್ಟರ್‌ ನಿಹಾಲ್‌ ಸರೀನ್‌, ಕಳೆದ ತಿಂಗಳು ನಡೆದ ಜೂನಿಯರ್‌ ಸ್ಪೀಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜೇತನಾದ. ಫೈನಲ್‌ನಲ್ಲಿ ವಿಶ್ವ ಜೂನಿಯರ್‌ ಆರನೇ ನಂಬರ್‌ ಆಟಗಾರ, ಅಮೆರಿಕದ ಅಲೆಕ್ಸಿ ಸರ್ನ ಮೇಲೆ ಜಯಗಳಿಸಿದ್ದ.

ಇತ್ತೀಚೆಗಷ್ಟೇ (ನವೆಂಬರ್‌ 1ರಿಂದ) ಆರಂಭವಾಗಿರುವ ವಿಶ್ವ ಸ್ಪೀಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಸರೀನ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ಆಟಗಾರ, ಫ್ರಾನ್ಸ್‌ನ ಮ್ಯಾಕ್ಸಿಮ್‌ ವ್ಯಾಕಿಯರ್‌ ಲ್ಯಾಗ್ರೆವ್‌ ಎದುರು ಸೋತಿದ್ದಾರೆ. ಆದರೆ ಈ ಹಂತದವರೆಗೆ ಬಂದಿದ್ದು ಹಾಲುಗಲ್ಲದ ಆಟಗಾರನ ಉತ್ತಮ ನಿರ್ವಹಣೆಯೇ. ಲ್ಯಾಗ್ರೆವ್‌, ಬ್ಲಿಟ್ಜ್‌ನಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರ. ಸರಿನ್‌ಗೆ ಇನ್ನೂ 16 ವರ್ಷ ಮಾತ್ರ.

ತಮಿಳುನಾಡಿನ ಪಿ.ಇನಿಯನ್‌, ಆಗಸ್ಟ್‌ ಕೊನೆಯಲ್ಲಿ ನಡೆದ ಪ್ರತಿಷ್ಠಿತ ವಿಶ್ವ ಓಪನ್‌ ಆನ್‌ಲೈನ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜೇತನಾದ. 17 ವರ್ಷದ ಭಾರತದ ಗ್ರ್ಯಾಂಡ್‌ಮಾಸ್ಟರ್‌ 9 ಅಂಕಗಳಲ್ಲಿ 7.5 ಅಂಕಗಳನ್ನು ಗಳಿಸಿದ್ದು ಕಡಿಮೆ ಸಾಧನೆಯೇನೂ ಆಗಿರಲಿಲ್ಲ. ಅಮೆರಿಕದ ಸಮಯಕ್ಕೆ ಅನುಗುಣವಾಗಿ (ಭಾರತೀಯ ಕಾಲಮಾನ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆ) ನಡೆಯುವ ಈ ಟೂರ್ನಿಗೆ ಸಜ್ಜಾಗಲು, ಒಂದು ವಾರ ಮೊದಲೇ ಇನಿಯನ್‌, ರಾತ್ರಿ ಹೊತ್ತು ಆಡುವ ಅಭ್ಯಾಸ ನಡೆಸಿದ್ದ ಎಂಬುದನ್ನು ಮರೆಯುವಂತಿಲ್ಲ.

ಕಳೆದ ತಿಂಗಳ ಕೊನೆಯಲ್ಲಿ ಮುಕ್ತಾಯಗೊಂಡ ಏಷ್ಯನ್‌ ನೇಷನ್ಸ್‌ ಕಪ್‌ ಟೂರ್ನಿಯಲ್ಲಿ ಮಹಿಳೆಯರ ತಂಡ ಚಿನ್ನದ ಪದಕ ಗಳಿಸಿದರೆ, ಪುರುಷರ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಶರಣಾಯಿತು.

ಭಾರತಕ್ಕೆ ಹೆಚ್ಚು ಖುಷಿ ತಂದಿರುವುದು ಒಲಿಂಪಿಯಾಡ್‌ನ ಸಾಧನೆ. ವಿಶ್ವನಾಥನ್‌ ಆನಂದ್‌ ಅವರು ಗೆದ್ದ ಪ್ರಶಸ್ತಿಗಳ ಕ್ಯಾಬಿನೆಟ್‌ನಲ್ಲಿ ಒಲಿಂಪಿಯಾಡ್‌ನ ಟ್ರೋಫಿ ಮಾತ್ರ ಇರಲಿಲ್ಲ. ಈ ತಂಡದ ಸಾಧನೆ ಮುಂದೆ ಪ್ರೇರಣೆಯಾಗುವುದರಲ್ಲಿ ಅನುಮಾನವಿಲ್ಲ.

ವಿದಿತ್‌ ಸಂತೋಷ್‌ ಗುಜರಾತಿ ನೇತೃತ್ವದ ಈ ತಂಡದಲ್ಲಿ ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಜೊತೆಗೆ ಅನುಭವಿ ಪೆಂಟ್ಯಾಲ ಹರಿಕೃಷ್ಣ, ಹಾಲಿ ವಿಶ್ವ ಮಹಿಳಾ ರ‍್ಯಾಪಿಡ್‌ ಚಾಂಪಿಯನ್‌ ಕೊನೆರು ಹಂಪಿ ಜೊತೆಗೆ ಕಿರಿಯ ಆಟಗಾರರಾದ ರಮೇಶಬಾಬು ಪ್ರಗ್ನಾನಂದ, ನಿಹಾಲ್‌ ಸರೀನ್‌, ಆಟಗಾರ್ತಿಯರಾದ ದಿವ್ಯಾ ದೇಶಮುಖ್‌, ವಂತಿಕಾ ಅಗರವಾಲ್‌ ಅಂಥವರೂ ಇದ್ದರು. ಇದು ಭಾರತ ಚೆಸ್‌ನಲ್ಲಿ ಕೇವಲ ಹಿರಿಯರ ಜೊತೆಗೆ ಪ್ರತಿಭಾನ್ವಿತ ಕಿರಿಯ ಆಟಗಾರರ ದಂಡನ್ನು ಹೊಂದಿರುವುದನ್ನು ಸೂಚಿಸಿತು. ವಿವಿಧ ಟೂರ್ನಿಗಳಲ್ಲಿ ಗೆಲ್ಲುವ ಮೂಲಕ, ಭಾರತದ ಚೆಸ್‌ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಕಿರಿಯ ಆಟಗಾರರು ಶ್ರುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.