ADVERTISEMENT

ಗೋವಾದಲ್ಲಿ ಇಂಡಿಯನ್ ರೇಸಿಂಗ್ ಫೆಸ್ಟಿವಲ್; ಕಿಚ್ಚಾಸ್ ಕಿಂಗ್ಸ್ ತಂಡ ಸ್ಪರ್ಧೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 11:04 IST
Last Updated 17 ಜನವರಿ 2026, 11:04 IST
   

ಬೆಂಗಳೂರು: ಬಹು ನಿರೀಕ್ಷಿತ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಫೆ. 14–15ರಂದು ಗೋವಾದಲ್ಲಿ ಜರುಗಲಿದೆ. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಕಾರ್ಯಕ್ರಮವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಸ್ಪರ್ಧೆಯು ಉತ್ತರ ಗೋವಾದ ಮೋಪಾದಲ್ಲಿರುವ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಎಂಐಎ) ರೌಂಡ್–4 ನಡೆಯಲಿದೆ.

ಕೊಯಂಮತ್ತೂರಿನ ಕಾರಿ ಮೋಟಾರ್ ಸ್ಪೀಡ್ ವೇನಲ್ಲಿ ರೌಂಡ್ 3 ನಡೆದಿತ್ತು. ಇದೇ ಮೊದಲ ಬಾರಿಗೆ ಎಫ್‌ಐಎ ಮಾನ್ಯತೆ ಪಡೆದ ಸ್ಟ್ರೀಟ್ ಸರ್ಕ್ಯೂಟ್‌ಗೆ ಗೋವಾ ಆತಿಥ್ಯ ವಹಿಸಲಿದೆ. 2.064 ಕಿ.ಮೀ ಉದ್ದದ ಸರ್ಕ್ಯೂಟ್‌ನಲ್ಲಿ 12 ತಿರುವುಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಗುಣಮಟ್ಟದ ವಿಶಿಷ್ಟ ಲೇಔಟ್ ಸಿದ್ದಪಡಿಸಲಾಗಿದೆ.

ADVERTISEMENT

ಈ ಕುರಿತು ಮಾತನಾಡಿರುವ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ‘ಬಹು ನಿರೀಕ್ಷೆಯ ನಂತರ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಗೋವಾಕ್ಕೆ ಬರುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮವನ್ನು ಆಯೋಜಿಸುವುದು ಗೋವಾಕ್ಕೆ ವಿಶ್ವಮಟ್ಟದ ಕ್ರೀಡೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಸಾಮರ್ಥ್ಯವಿದೆ ಎಂಬುದನ್ನು ತೋರಿಸುತ್ತದೆ. ಫಾರ್ಮುಲಾ ರೇಸಿಂಗ್ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಸ್ಥಳೀಯ ವ್ಯಾಪಾರಗಳು ಮತ್ತು ಸೇವಾ ಕ್ಷೇತ್ರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಜೊತೆಗೆ ಎಂಜಿನಿಯರಿಂಗ್, ತಂತ್ರಜ್ಞಾನ, ಈವೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಯುವಕರಿಗೆ ಹೊಸ ದಾರಿಗಳನ್ನು ತೆರೆದಿಡಲಿದೆ. ಜಗತ್ತಿನಾದ್ಯಂತದಿಂದ ಆಗಮಿಸುವ ತಂಡಗಳು, ಅಭಿಮಾನಿಗಳು ಮತ್ತು ಪ್ರವಾಸಿಗರನ್ನು ಗೋವಾಕ್ಕೆ ಸ್ವಾಗತಿಸಲು ನಾವು ಎದುರುನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಅಂತರರಾಷ್ಟ್ರೀಯ ಹಾಗೂ ಭಾರತೀಯ ಚಾಲಕರು ಒಟ್ಟಿಗೆ ಸ್ಪರ್ಧಿಸುತ್ತಾರೆ. ಪ್ರತಿಯೊಂದು ತಂಡವೂ ನಾಲ್ವರು ಚಾಲಕರನ್ನು ಒಳಗೊಂಡಿದ್ದು, ಅದರಲ್ಲಿ ಒಬ್ಬ ಅನುಭವಿ ಅಂತರರಾಷ್ಟ್ರೀಯ ಚಾಲಕ, ಉದಯೋನ್ಮುಖ ಅಂತರರಾಷ್ಟ್ರೀಯ ಚಾಲಕ, ಭಾರತೀಯ ಚಾಲಕ ಹಾಗೂ ಮಹಿಳಾ ಚಾಲಕಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಹೈದರಾಬಾದ್ ಮತ್ತು ಚೆನ್ನೈನಲ್ಲಿ ನಡೆದ ಹಿಂದಿನ ಸ್ಟ್ರೀಟ್ ರೇಸ್‌ಗಳ ಯಶಸ್ಸಿನ ನಂತರ, ರೇಸಿಂಗ್ ಪ್ರೊಮೊಶನ್ಸ್ ಪ್ರೈ. ಲಿ. ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯನ್ನು ಆಯೋಜಿಸುತ್ತಿದೆ.

ರೇಸಿಂಗ್ ಪ್ರೊಮೊಶನ್ಸ್ ಪ್ರೈ. ಲಿ. (ಆರ್‌ಪಿಪಿಎಲ್‌) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ, ‘ಸ್ಟ್ರೀಟ್ ಸರ್ಕ್ಯೂಟ್‌ಗಳು ಭಾರತೀಯ ಮೋಟಾರ್‌ಸ್ಪೋರ್ಟ್‌ನ ಮುಂದಿನ ಅಧ್ಯಾಯ. ಇವು ಕ್ರೀಡೆಯೊಂದಿಗೆ ಜನರನ್ನು ಸಂಪರ್ಕಿಸುವ ವಿಧಾನವನ್ನೇ ಬದಲಿಸುತ್ತವೆ. ಗೋವಾದಲ್ಲಿ ನಡೆಯಲಿರುವ ಈ ರೌಂಡ್ ನಮ್ಮ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ಸ್ಟ್ರೀಟ್ ರೇಸ್ ಹಂತದೊಂದಿಗೆ, ನಾವು ಕೇವಲ ಮೋಟಾರ್‌ಸ್ಪೋರ್ಟ್‌ನಲ್ಲಷ್ಟೇ ಅಲ್ಲ, ಅದು ಭಾರತದ ನಗರಗಳು, ಸಂಸ್ಕೃತಿ ಹಾಗೂ ಯುವಕರೊಂದಿಗೆ ಹೇಗೆ ಸಂಪರ್ಕ ಹೊಂದುತ್ತದೆ ಎಂಬುದರಲ್ಲಿಯೂ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಈ ರೇಸಿಂಗ್ ಫೆಸ್ಟಿವಲ್‌ಗೆ ಖ್ಯಾತ ನಟರು ಹಾಗೂ ಕ್ರೀಡಾ ತಾರೆಗಳ ತಂಡ ಮಾಲೀಕತ್ವವೂ ವಿಶೇಷ ಮೆರುಗು ನೀಡುತ್ತಿದೆ. ಜಾನ್ ಅಬ್ರಹಾಂ (ಗೋವಾ ಏಸಸ್ ಜೆಎ ರೇಸಿಂಗ್), ಅರ್ಜುನ್ ಕಪೂರ್ (ಸ್ಪೀಡ್ ಡೀಮನ್ಸ್ ದೆಹಲಿ), ಸೌರವ್ ಗಂಗೂಲಿ (ಕೋಲ್ಕತ್ತಾ ರಾಯಲ್ ಟೈಗರ್ಸ್), ನಾಗ ಚೈತನ್ಯ (ಹೈದರಾಬಾದ್ ಬ್ಲಾಕ್ ಬರ್ಡ್ಸ್), ಕಿಚ್ಚ ಸುದೀಪ್ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) ಹಾಗೂ ಡಾ. ಶ್ವೇತಾ ಸುಂದೀಪ್ ಆನಂದ್ (ಚೆನ್ನೈ ಟರ್ಬೋ ರೈಡರ್ಸ್) ಸೇರಿದಂತೆ ಹಲವರು ತಂಡ ಮಾಲಿಕರಾಗಿದ್ದಾರೆ.

ಡೈರೆಕ್ಟೆಡ್‌ ಬೈ ಝೊಮ್ಯಾಟೊ ಆ್ಯಪ್‌ನಲ್ಲಿ ಟೂರ್ನಿಯ ಟಿಕೆಟ್‌ಗಳು ಲಭ್ಯವಿದೆ. ಸ್ಟಾರ್‌ ಸ್ಪೋರ್ಟ್ಸ್‌ ಸೆಲೆಕ್ಟ್ 2 ಚಾನೆಲ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಟೂರ್ನಿಯ ನೇರಪ್ರಸಾರವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.