ಪ್ಯಾರಿಸ್: ಭಾರತದ ಬಲರಾಜ್ ಪನ್ವರ್ ಅವರು ಪ್ಯಾರಿಸ್ ಒಲಿಂಪಿಕ್ಸ್ ರೋಯಿಂಗ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ಸ್ಕಲ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಭಾನುವಾರ ನಡೆದ ರೆಪೆಷಾಜ್–2ರಲ್ಲಿ ಪನ್ವರ್ ಅವರು 7 ನಿ.12.41 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಮೊದಲ ಸ್ಥಾನದಲ್ಲಿ ಗುರಿ ತಲುಪಲು ಕ್ವೆಂಟಿನ್ ಅಂಟೋಗ್ನಿಲ್ (ಮೊನಾಕೊ) ಅವರು 7ನಿ 10.00 ಸೆಕೆಂಡು ತೆಗೆದುಕೊಂಡರು. 7ನಿ 19.60 ಸೆಕೆಂಡುಗಳಲ್ಲಿ ಗುರಿ ತಲುಪಿದ ಇಂಡೋನೆಷ್ಯಾದ ಮೆಮೊ ಮೂರನೇ ಸ್ಥಾನ ಪಡೆದರು.
ಪ್ರತಿ ರೆಪೆಷಾಜ್‌ನಲ್ಲಿ ಮೊದಲ ಎರಡು ಸ್ಥಾನ ಪಡೆದವರು ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.
ಪನ್ವರ್ ಅವರು 500 ಮೀ ದೂರವನ್ನು 1ನಿ 44:13ಸೆಕೆಂಡುಗಳಲ್ಲಿ, 1000 ದೂರವನ್ನು 3ನಿ 33.94 ಸೆಕೆಂಡುಗಳಲ್ಲಿ, 1500 ಮೀಟರ್ ದೂರವನ್ನು 5ನಿ 23.22ಸೆಕೆಂಡುಗಳಲ್ಲಿ ದಾಟಿ ಎರಡನೇ ಸ್ಥಾನದಲ್ಲಿ ಇದ್ದರು. ನಂತರ 2000 ಮೀ ದೂರವನ್ನು 7ನಿ 12.41 ಸೆಕೆಂಡುಗಳಲ್ಲಿ ತಲುಪುವ ಮೂಲಕ 2ನೇ ಸ್ಥಾನ ಪಡೆದುಕೊಂಡರು.
ಶನಿವಾರ ನಡೆದಿದ್ದ ಪುರುಷರ ಸಿಂಗಲ್ಸ್ ಸ್ಕಲ್ ವಿಭಾಗದಲ್ಲಿ 7ನಿ 07:11ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಪನ್ವರ್ ನಾಲ್ಕನೇ ಸ್ಥಾನ ಗಳಿಸಿ ರೆಪೆಷಾಜ್ ಸುತ್ತಿಗೆ ಪಡೆದಿದ್ದರು.
ರೆಪೆಷಾಜ್ ಒಂದರಲ್ಲಿ ಸ್ಲೋವೇನಿಯಾದ ಇವಾನ್ ಇಸಾಕ್ ಝ್ವೆಗೆಲ್ಜಿ(7ನಿ 06:90ಸೆ) ಮತ್ತು ಪರುಗ್ವೆಯ ಜೆವಿಯರ್ ಇನ್ಸ್‌ಫ್ರಾನ್ (7ನಿ 08:29ಸೆ) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು.
ರೆಪಷಾಜ್ ಮೂರರಲ್ಲಿ ಅಲ್ಜೀರಿಯಾದ ಅಲಿ ಸಿದ್ ಬೌಡಿನಾ (7ನಿ 10:23ಸೆ) ಮೊದಲ ಮತ್ತು ಚುನ್ ವಿನ್ ಚಿವು (7ನಿ 12:94ಸೆ) ಎರಡನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.