ADVERTISEMENT

ಆಲ್‌ ಇಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಿಂಧು, ಲಕ್ಷ್ಯ ಕಣದಲ್ಲಿ

ಪಿಟಿಐ
Published 13 ಮಾರ್ಚ್ 2023, 12:35 IST
Last Updated 13 ಮಾರ್ಚ್ 2023, 12:35 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಬರ್ಮಿಂಗ್‌ಹ್ಯಾಮ್‌: 22 ವರ್ಷಗಳ ಪ್ರಶಸ್ತಿ ಬರ ನೀಗುವ ನಿರೀಕ್ಷೆಯೊಂದಿಗೆ ಭಾರತದ ಬ್ಯಾಡ್ಮಿಂಟನ್‌ ಪಟುಗಳು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಮಂಗಳವಾರ ಇಲ್ಲಿ ಆರಂಭವಾಗುವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು, ಯುವ ಆಟಗಾರ ಲಕ್ಷ್ಯ ಸೇನ್‌ ಅವರು ಭಾರತದ ಭರವಸೆ ಎನಿಸಿದ್ದಾರೆ.

ಭಾರತದ ಪುಲ್ಲೇಲ ಗೋಪಿಚಂದ್‌ (2001) ಮತ್ತು ಪ್ರಕಾಶ್‌ ಪಡುಕೋಣೆ (1980) ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿತ್ತು. ಪ್ರಮುಖ ಆಟಗಾರರಾದ ಲಕ್ಷ್ಯ, ಸಿಂಧು ಮತ್ತು ಸೈನಾ ಅವರಿಗೆ ಮರೀಚಿಕೆಯಾಗಿದೆ.

ADVERTISEMENT

2015ರಲ್ಲಿ ಸೈನಾ ಅವರು ಚಾಂಪಿಯನ್‌ಷಿಪ್‌ನ ರನ್ನರ್ಸ್ಅಪ್ ಆಗಿದ್ದರು. ಕಳೆದ ಆವೃತ್ತಿಯಲ್ಲಿ ಲಕ್ಷ್ಯ ಅವರು ಫೈನಲ್‌ನಲ್ಲಿ ಸೋತಿದ್ದರು. ಆದರೆ ಸಿಂಧು ಅವರಿಗೆ ಸೆಮಿಫೈನಲ್ ತಡೆ ದಾಟಿ ಮುಂದುವರಿಯಲು ಸಾಧ್ಯವಾಗಿಲ್ಲ.

ಗಾಯದಿಂದ ಬಳಲಿ ಬಹಳ ದಿನಗಳ ಬಳಿಕ ಕಣಕ್ಕೆ ಮರಳಿದ್ದ ಸಿಂಧು ಮತ್ತು ಲಕ್ಷ್ಯ ಅವರಿಗೆ ಮಲೇಷ್ಯಾ ಓಪನ್‌ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಟೂರ್ನಿಯು ಅವರಿಗೆ ಸವಾಲಿನದ್ದಾಗಿರಲಿದೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ ಅವರು ಚೀನಾ ತೈಪೆಯ ಚೊ ಟಿಯೆನ್ ಚೆನ್ ಅವರನ್ನು ಎದುರಿಸುವರು. ಮಹಿಳೆಯರ ವಿಭಾಗದಲ್ಲಿ ಸಿಂಧು, ಚೀನಾದ ಜಾಂಗ್‌ ಯಿ ಮನ್‌ ಎದುರು ಸೆಣಸಲಿದ್ದಾರೆ.

ಎಚ್‌.ಎಸ್‌. ಪ್ರಣಯ್ ಅವರು ಚೀನಾ ತೈಪೆಯ ವಾಂಗ್‌ ಜು ವೇ ಎದುರು, ಕಿದಂಬಿ ಶ್ರೀಕಾಂತ್‌ ಅವರು ಫ್ರಾನ್ಸ್‌ನ ತೊಮಾ ಜೂನಿಯರ್ ಪೊಪೊವ್‌ ಎದುರು ಅಭಿಯಾನ ಆರಂಭಿಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು ಚೀನಾದ ಹಾನ್ ಯು ಎದುರು ಆಡುವರು.

ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಇಂಡೊನೇಷ್ಯಾದ ಮಾರ್ಕಸ್‌ ಫರ್ನಾಲ್ಡಿ ಗಿಡಿಯೊನ್‌– ಕೆವಿನ್‌ ಸಂಜಯ ಸುಕಮುಲ್ಜೊ ಎದುರು ಆಡಲಿದ್ದಾರೆ.

ಡಬಲ್ಸ್‌ನಲ್ಲಿ ಎಂ.ಆರ್‌. ಅರ್ಜುನ್– ಧ್ರುವ ಕಪಿಲ, ಮಹಿಳಾ ಡಬಲ್ಸ್‌ನಲ್ಲಿ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌, ಅಶ್ವಿನಿ ಭಟ್‌– ಶಿಖಾ ಗೌತಮ್‌, ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್–ತನಿಶಾ ಕ್ರಾಸ್ತೊ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.