ನವದೆಹಲಿ: 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸಂಬಂಧಿಸಿದ ಬಿಡ್ ಬಗ್ಗೆ ನಿರ್ಧಾರ ಇನ್ನಷ್ಟು ವಿಳಂಬವಾಗುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೂತನ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಅವರು ಈವರೆಗಿನ ಪ್ರಕ್ರಿಯೆಗೆ ಗುರುವಾರ ತಡೆಹಾಕಿದ್ದಾರೆ.
ಭವಿಷ್ಯದ ಆತಿಥೇಯ ರಾಷ್ಟ್ರವನ್ನು ‘ಸೂಕ್ತ ಸಮಯ’ದೊಳಗೆ ಕಂಡುಕೊಳ್ಳಲು ಹೊಸ ಕಾರ್ಯತಂಡ ರಚಿಸಲು ಐಒಸಿ ಅಧ್ಯಕ್ಷೆ ಮುಂದಾಗಿದ್ದಾರೆ.
ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೊದಲ ಮಹಿಳೆ ಹಾಗೂ ಆಫ್ರಿಕಾದ ಮೊದಲ ಅಧ್ಯಕ್ಷೆ ಎನಿಸಿರುವ ಕೊವೆಂಟ್ರಿ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದರು.
2036ರ ಬೇಸಿಗೆ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಿರುವ ದೇಶಗಳಲ್ಲಿ ಭಾರತವೂ ಒಳಗೊಂಡಿದ್ದು, ಮೊದಲ ಬಾರಿ ಈ ಪ್ರತಿಷ್ಠಿತ ಕ್ರೀಡೆಗಳನ್ನು ಆಯೋಜಿಸಲು ಉತ್ಸುಕತೆ ತೋರಿದೆ.
ಈ ಮೊದಲು, ಬಿಡ್ ಬಗ್ಗೆ ನಿರ್ಧಾರ ಮುಂದಿನ ವರ್ಷ ನಡೆಯಬಹುದೆಂಬ ನಿರೀಕ್ಷೆಯಿತ್ತು.
‘ಈಗಿನ ಪ್ರಕ್ರಿಯೆಗೆ ತಡೆ ನೀಡಲು ಮತ್ತು ಭವಿಷ್ಯದ ಆತಿಥ್ಯಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಪರಾಮರ್ಶೆಗೆ ಒಳಪಡಿಸುವ ಸಂಬಂಧ ಐಒಸಿ ಸದಸ್ಯರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ನಾವು ಈ ಬಗ್ಗೆ ಅವಲೋಕನ ನಡೆಸಲು ಕಾರ್ಯತಂಡವೊಂದನ್ನು ರಚಿಸಲಿದ್ದೇವೆ’ ಎಂದು 41 ವರ್ಷ ವಯಸ್ಸಿನ ಕ್ರಿಸ್ಟಿ ತಿಳಿಸಿದರು.
ಲುಸಾನ್‌ನಲ್ಲಿ ನಡೆದ ಐಒಸಿಯ ಮೊದಲ ಕಾರ್ಯನಿರ್ವಾಹಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಕ್ರಿಸ್ಟಿ ಮಾತನಾಡಿದರು.
ಎರಡು ಕಾರಣಗಳಿಗಾಗಿ ಈ (ತಡೆಯೊಡ್ಡುವ) ನಿರ್ಧಾರ ಕೈಗೊಳ್ಳಲಾಗಿದೆ. ‘ಮೊದಲನೆಯದಾಗಿ, ಸಮಿತಿ ಸದಸ್ಯರು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಕೊಳ್ಳಲು ಆಸಕ್ತರಾಗಿದ್ದಾರೆ. ಎರಡನೆಯದಾಗಿ, ಮುಂದಿನ ಆತಿಥೇಯರನ್ನು ಯಾವಾಗ ಘೋಷಿಸಬೇಕು ಎಂಬ ಬಗ್ಗೆ ವ್ಯಾಪಕವಾದ ಚರ್ಚೆಯಾಯಿತು’ ಎಂದು ಜಿಂಬಾಬ್ವೆಯ ಮಾಜಿ ಕ್ರೀಡಾ ಸಚಿವೆ ತಿಳಿಸಿದರು.
2028ರ ಒಲಿಂಪಿಕ್ ಕ್ರೀಡೆಗಳನ್ನು ಲಾಸ್ ಏಂಜಲೀಸ್‌ನಲ್ಲಿ ನಡೆಸಲು, 2032ರ ಒಲಿಂಪಿಕ್ ಕ್ರೀಡೆಗಳನ್ನು ಬ್ರಿಸ್ಬೇನ್‌ನಲ್ಲಿ ಹಮ್ಮಿಕೊಳ್ಳಲು ಮತ್ತು 2030ರ ಚಳಿಗಾಲದ ಕ್ರೀಡೆಗಳನ್ನು ಫ್ರೆಂಚ್ ಆಲ್ಫ್ಸ್‌ನಲ್ಲಿ ನಡೆಸಲು ಈ ಮೊದಲೇ ನಿರ್ಧಾರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.