ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಮತ್ತೊಮ್ಮೆ ಭಾರತಕ್ಕೆ ನಿರಾಸೆ

ಮ್ಯಾರಥಾನ್‌ನಲ್ಲಿ ಗೋಪಿ ತೋಣಕ್ಕಲ್‌ಗೆ 21ನೇ ಸ್ಥಾನ

ಏಜೆನ್ಸೀಸ್
Published 6 ಅಕ್ಟೋಬರ್ 2019, 16:24 IST
Last Updated 6 ಅಕ್ಟೋಬರ್ 2019, 16:24 IST
ಗೋಪಿ ತೋಣಕ್ಕಲ್
ಗೋಪಿ ತೋಣಕ್ಕಲ್   

ದೋಹಾ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಭಾನುವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಒಂದು ಪದಕ ಗೆಲ್ಲವುದಕ್ಕೂ ಸಾಧ್ಯವಾಗದ ಭಾರತದ ಅಥ್ಲೀಟ್‌ಗಳು ಮೂರು ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದ್ದೇ ಶ್ರೇಷ್ಠ ‘ಸಾಧನೆ’ಯಾಯಿತು!

ಪುರುಷರ ಮ್ಯಾರಥಾನ್‌ನಲ್ಲಿ ಗೋಪಿ ತೋಣಕ್ಕಲ್‌ 21ನೇ ಸ್ಥಾನ ಪಡೆದರು. ಇದರೊಂದಿಗೆ ಭಾರತದ ಅಭಿಯಾನ ಮುಕ್ತಾಯಗೊಂಡಿತು. ಮಿಶ್ರ 4x400 ಮೀಟರ್ಸ್‌ ರಿಲೇ, ಪುರುಷರ 3000 ಮೀಟರ್ಸ್ ಸ್ಟೀಪಲ್‌ ಚೇಸ್ ಮತ್ತು ಮಹಿಳೆಯರ ಜಾವೆಲಿನ್ ಥ್ರೋದಲ್ಲಿ ಭಾರತದ ಅಥ್ಲೀಟ್‌ಗಳು ಫೈನಲ್‌ ಪ್ರವೇಶಿಸಿದರೂ ನಿರಾಸೆಯೊಂದಿಗೆ ಹೊರಬಿದ್ದರು.

ಆದರೆ ರಿಲೇ ತಂಡದವರು ಮತ್ತು ಸ್ಟೀಪಲ್ ಚೇಸ್ ಪಟು ಅವಿನಾಶ್ ಸಬ್ಳೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿ ಗಮನ ಸೆಳೆದರು. 2015ರಲ್ಲೂ ಭಾರತದ ಮೂವರು ಫೈನಲ್‌ ಪ್ರವೇಶಿಸಿದ್ದರು. ಕಳೆದ ಬಾರಿ ಒಬ್ಬರು ಮಾತ್ರ ಅಂತಿಮ ಸುತ್ತು ಪ್ರವೇಶಿಸಿದ್ದರು.

ADVERTISEMENT

ಉರಿ ಸೆಕೆಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ 55 ಸ್ಪರ್ಧಿಗಳಿದ್ದರು. 31 ವರ್ಷದ ಗೋಪಿ ತೋಣಕ್ಕಲ್ 2 ತಾಸು 15 ನಿಮಿಷ 57 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 2017ರಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಮ್ಯಾರಥಾನ್‌ನಲ್ಲಿ ಅವರು ಚಿನ್ನ ಗೆದ್ದಿದ್ದರು.

ರಿಯೊ ಒಲಿಂಪಿಕ್ಸ್‌ನಲ್ಲಿ 25ನೇ ಸ್ಥಾನ ಗಳಿಸಿದ್ದ ಅವರು ಕಳೆದ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 28ನೆಯವರಾಗಿದ್ದರು. ಇಥಿಯೋಪಿಯಾದ ಲೆಲಿಸಾ ಡೆಸಿಸಾ (2 ತಾಸು 10:40 ನಿಮಿಷ) ಚಿನ್ನ ಗೆದ್ದರೆ, ಅದೇ ದೇಶದ ಮೋಸಿನೆಟ್ ಜೆರೆಮಿ (2 ತಾಸು 10:44 ನಿಮಿಷ) ಬೆಳ್ಳಿ ಮತ್ತು ಕೆನ್ಯಾದ ಅಮೋಸ್ ಕಿಪ್ರುಟೊ ಕಂಚಿನ ಪದಕ ಗಳಿಸಿದರು.

ಸಿಫಾನ್‌ಗೆ ಎರಡನೇ ಚಿನ್ನ: ಇಥಿಯೋಪಿಯಾದಲ್ಲಿ ಜನಿಸಿ ನೆದರ್ಲೆಂಡ್‌ನಲ್ಲಿ ಬೆಳೆದ ಸಿಫಾನ್ ಹಸನ್ ಎರಡನೇ ಚಿನ್ನ ಗಳಿಸಿ ಮಿಂಚಿದರು. ಶನಿವಾರ ನಡೆದ ಮಹಿಳೆಯರ 1500 ಮೀಟರ್ಸ್ ಓಟದಲ್ಲಿ ಅವರು 3 ನಿಮಿಷ 51.95 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಈ ವಿಭಾಗದಲ್ಲಿ ಅತಿ ವೇಗದಆರನೇ ಓಟಗಾರ್ತಿ ಎನಿಸಿಕೊಂಡರು. ಕಳೆದ ಶನಿವಾರ 10 ಸಾವಿರ ಮೀಟರ್ಸ್ ಓಟದಲ್ಲೂ ಅವರು ಮೊದಲಿಗರಾಗಿದ್ದರು. ಕೆನ್ಯಾದ ಫೇತ್ ಕಿಪೆಗಾನ್ ಮತ್ತು ಇಥಿಯೋಪಿಯಾದ ಗುಡಾಫ್ ಸೆಗೆ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಅಥ್ಲೀಟ್‌ಗಳ ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ಸಂಬಂಧಿಸಿ ಸಿಫಾನ್ ಅವರ ಕೋಚ್ ಆಲ್ಬರ್ಟೊ ಸಲಾಜರ್ ಅವರನ್ನು 4 ವರ್ಷಗಳ ಅವಧಿಗೆ ಅಮಾನತು ಮಾಡಲಾಗಿತ್ತು. ಶನಿವಾರ ಪದಕ ಗೆದ್ದ ನಂತರ ಮಾತನಾಡಿದ ಸಿಫಾನ್ ‘ಉದ್ದೀಪನ ಮದ್ದು ಸೇವನೆಯಂಥ ಅಕ್ರಮಗಳನ್ನು ಮಾಡಲು ನನ್ನ ಮನಸ್ಸು ಎಂದಿಗೂ ಒಪ್ಪಲಾರದು. ನನ್ನನ್ನು ಬೇಕಿದ್ದರೆ ಪ್ರತಿ ದಿನವೂ ಪರೀಕ್ಷೆಗೆ ಒಳಪಡಿಸಿ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.