ADVERTISEMENT

ಭಾರತದ ಸಾತ್ವಿಕ್–ಚಿರಾಗ್ ಜೋಡಿಗೆ ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಡಬಲ್ಸ್ ಕಿರೀಟ

ಸಾತ್ವಿಕ್–ಚಿರಾಗ್ ಜೋಡಿ ಚಾರಿತ್ರಿಕ ಸಾಧನೆ

ಪಿಟಿಐ
Published 18 ಜೂನ್ 2023, 11:31 IST
Last Updated 18 ಜೂನ್ 2023, 11:31 IST
ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ
ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ   

ಜಕಾರ್ತ : ಭಾರತದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಡಬಲ್ಸ್‌ ಪ್ರಶಸ್ತಿ ಜಯಿಸಿ, ಚಾರಿತ್ರಿಕ ದಾಖಲೆ ಮಾಡಿತು.

ಸೂಪರ್ 1000 ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿಯು 21–17, 21–18ರ ನೇರ ಗೇಮ್‌ಗಳಲ್ಲಿ ಮಲೇಷ್ಯಾದ ಆ್ಯರನ್ ಚಿಯಾ ಮತ್ತು ಸೊಹ ವೂಯಿ ಯೀಕಾ ವಿರುದ್ಧ ಜಯಗಳಿಸಿತು.

ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಜೋಡಿಯು ಚಿನ್ನ ಜಯಿಸಿತ್ತು. ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿತ್ತು. ಹೋದ ವರ್ಷ ಥಾಮಸ್ ಕಪ್ ಟೂರ್ನಿಯಲ್ಲಿ ಗೆದ್ದ ಭಾರತ ತಂಡದಲ್ಲಿಯೂ ಇದ್ದರು. ಈಚೆಗೆ ದುಬೈನಲ್ಲಿ ನಡೆದಿದ್ದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ADVERTISEMENT

ಸೂಪರ್ 1000 ಸರಣಿಯ ಟೂರ್ನಿಗಳಲ್ಲಿ ಇದೇ  ಸಲ ಫೈನಲ್ ತಲುಪಿತ್ತು. ಸೆಮಿಫೈನಲ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅವರು ಕೊರಿಯಾದ ಕಾಂಗ್ ಮಿನ್ ಯೂಕ್ ಮತ್ತು ಸಿಯೊ ಸೆಂಗ್ ಜೇ ವಿರುದ್ಧ ಜಯಿಸಿದ್ದರು.

ಬಿಡಬ್ಲ್ಯುಎಫ್‌ (ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್) ವಿಶ್ವ ಟೂರ್‌ ಸರಣಿಯನ್ನು ಆರು ಹಂತಗಳಲ್ಲಿ ವಿಂಗಡಿಸಿದೆ. ಅದರಲ್ಲಿ ವಿಶ್ವ ಟೂರ್ ಫೈನಲ್ಸ್,  ನಾಲ್ಕು ಸೂಪರ್ 1000, ಆರು ಸೂಪರ್ 750,  ಏಳು ಸೂಪರ್ 500 ಮತ್ತು 11 ಸೂಪರ್ 300 ಟೂರ್ನಿಗಳನ್ನು ನಡೆಸಲಾಗುತ್ತದೆ. ಅಲ್ಲದೇ ಇನ್ನೊಂದು ವಿಭಾಗವಾದ ಬಿಡಬ್ಲ್ಯುಎಫ್‌ ಟೂರ್ ಸೂಪರ್ 100 ಹಂತದಲ್ಲಿಯೂ ರ‍್ಯಾಂಕಿಂಗ್ ಪಾಯಿಂಟ್ಸ್‌ಗಳನ್ನು ನೀಡಲಾಗುತ್ತದೆ.

ಈ ಪ್ರತಿಯೊಂದು ಟೂರ್ನಿಗೂ ಪ್ರತ್ಯೇಕ ಅಂಕಗಳು ಹಾಗೂ ನಗದು ಪ್ರಶಸ್ತಿ ನೀಡಲಾಗುತ್ತದೆ. ಇವೆಲ್ಲದರ ಪೈಕಿ ಸೂಪರ್ 1000 ಹಂತವು ಉನ್ನತವಾದದ್ದು.

India

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.