ADVERTISEMENT

ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನದ ಬೇಟೆ

ಮುಂದುವರಿದ ಭಾರತದ ಪಾರಮ್ಯ

ಪಿಟಿಐ
Published 22 ಮಾರ್ಚ್ 2021, 12:39 IST
Last Updated 22 ಮಾರ್ಚ್ 2021, 12:39 IST
ದಿವ್ಯಾಂಶ್‌ ಸಿಂಗ್‌ ಪನ್ವರ್‌
ದಿವ್ಯಾಂಶ್‌ ಸಿಂಗ್‌ ಪನ್ವರ್‌   

ನವದೆಹಲಿ: ಭಾರತದ ಯುವ ಶೂಟಿಂಗ್ ಪಟುಗಳು ಐಎಸ್‌ಎಸ್‌ಎಫ್ ವಿಶ್ವಕಪ್ ಟೂರ್ನಿಯಲ್ಲಿ ಪದಕಗಳ ಬೇಟೆ ಮುಂದುವರಿಸಿದರು. ಇಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ನಾಲ್ಕನೇ ದಿನವಾದ ಸೋಮವಾರಮಿಶ್ರ ತಂಡಗಳಿಗಾಗಿ ಇದ್ದ 10 ಮೀಟರ್ ಏರ್ ರೈಫಲ್‌ ಹಾಗೂ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದರು. ಇದರೊಂದಿಗೆಭಾರತ ಒಟ್ಟು 14 ಪದಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಇನ್ನಷ್ಟು ಭದ್ರಪ‍ಡಿಸಿಕೊಂಡಿತು.

10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಹಾಗೂ ಮನು ಭಾಕರ್ ಜೋಡಿ ಪಾರಮ್ಯ ಮೆರೆದರು. ದಿವ್ಯಾಂಶ್ ಸಿಂಗ್ ಪನ್ವರ್ ಹಾಗೂ ಇಳವೆನ್ನಿಲಾ ವಾಳರಿವನ್ ಏರ್‌ ರೈಫಲ್‌ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು.

18 ವರ್ಷದ ಚೌಧರಿ ಹಾಗೂ 19ರ ಹರಯದ ಭಾಕರ್‌ ಫೈನಲ್‌ನಲ್ಲಿ 16–12ರಿಂದ ಇರಾನ್‌ನ ಗೋಲ್‌ನೌಶ್‌ ಸೆಬಾತೊಲ್ಲಾಹಿ–ಜಾವೇದ್‌ ಫಾರೋಗಿ ಅವರನ್ನು ಮಣಿಸಿದರು. ಈ ಟೂರ್ನಿಯಲ್ಲಿ ಭಾರತಕ್ಕೆ ಇದು ಐದನೇ ಚಿನ್ನದ ಪದಕವಾಗಿತ್ತು. ಒಟ್ಟಾರೆ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತದ ಈ ಯುವ ಜೋಡಿ ಮುಡಿಗೇರಿಸಿಕೊಂಡ ಐದನೇ ಚಿನ್ನ ಎಂಬುದು ವಿಶೇಷ.

ADVERTISEMENT

10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲೇ ಸ್ಪರ್ಧಿಸಿದ್ದ ಯಶಸ್ವಿನಿ ಸಿಂಗ್ ದೇಸ್ವಾಲ್‌–ಅಭಿಷೇಕ್ ವರ್ಮಾ ಜೋಡಿಯು ಚಿನ್ನದ ಪದಕ ಒಲಿಸಿಕೊಂಡಿತು. ಈ ಹಾದಿಯಲ್ಲಿ ಅವರು 17–13ರಿಂದ ಟರ್ಕಿಯ ಸೆವ್ವಾಲ್‌ ಇಲಾಯ್ದಾ ತರ್ಹಾನ್‌– ಇಸ್ಮಾಯಿಲ್ ಕೆಲೆಸ್ ಸವಾಲು ಮೀರಿದರು.

21 ವರ್ಷದ ಇಳವೆನ್ನಿಲಾ ಹಾಗೂ 18ರ ಪ್ರಾಯದ ದಿವ್ಯಾಂಶ್ ಸಿಂಗ್ ಅವರು 10 ಮೀ. ಏರ್ ರೈಫಲ್ ವಿಭಾಗದ ಫೈನಲ್ ಹಣಾಹಣಿಯಲ್ಲಿ 16–10ರಿಂದ ಹಂಗರಿಯ ಇಸ್ತವಾನ್‌ ಪೆನಿ ಹಾಗೂ ಈಸ್ತರ್ ಡೆನೆಸ್ ಅವರ ಸವಾಲು ಮೀರಿದರು. ಸೀನಿಯರ್ ವಿಶ್ವಕಪ್‌ ಟೂರ್ನಿಯಲ್ಲಿ ಇಳವೆನ್ನಿಲಾಗೆ ಇದು ಮೊದಲ ಚಿನ್ನವಾದರೆ, ದಿವ್ಯಾಂಶ್‌ಗೆ ನಾಲ್ಕನೆಯದು.

ಈ ವಿಭಾಗದಲ್ಲಿ ಅಮೆರಿಕದ ಮೇರಿ ಕರೋಲಿನ್ ಟಕ್ಕರ್‌– ಲೂಕಾಸ್ ಕೊಜೆನಿಸ್ಕಿ ಜೋಡಿಯು ಕಂಚಿನ ಪದಕಕ್ಕೆ ಮುತ್ತಿಟ್ಟಿತು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಂಜುಮ್ ಮೌದ್ಗಿಲ್‌– ಅರ್ಜುನ್ ಬಬುತಾ ಫೈನಲ್ ತಲುಪಲು ವಿಫಲರಾದರು.

ಸ್ಕೀಟ್‌ ವಿಭಾಗದಲ್ಲಿ ‘ಸ್ವೀಟ್‌‘: ಟೂರ್ನಿಯ ಪುರುಷರ ಸ್ಕೀಟ್ ವಿಭಾಗದಲ್ಲಿ ಭಾರತ ತಂಡವು ಚಿನ್ನದ ಪದಕದ ಸಿಹಿ ಸವಿಯಿತು. ಮಹಿಳಾ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರುಜೋತ್ ಖಂಗುರ, ಮೈರಾಜ್ ಅಹಮದ್‌ ಖಾನ್‌ ಹಾಗೂ ಅಂಗದ್ ವೀರ್ ಸಿಂಗ್ ಬಾಜ್ವಾ ಅವರು ಫೈನಲ್‌ ಹಣಾಹಣಿಯಲ್ಲಿ 6–2ರಿಂದ ಕತಾರ್‌ ತಂಡವನ್ನು ಸೋಲಿಸಿತು. ಕತಾರ್‌ ತಂಡವು ನಾಸರ್ ಅಲ್ ಅತಿಯಾ, ಅಲಿ ಅಹಮದ್‌ ಎ ಒ ಅಲ್‌ ಇಷಾಕ್‌ ಹಾಗೂ ರಶೀದ್ ಹಮಾದ್‌ ಅವರನ್ನು ಒಳಗೊಂಡಿತ್ತು.

ಮಹಿಳೆಯರ ಸ್ಕೀಟ್‌ ಫೈನಲ್‌ನಲ್ಲಿ ಪರಿನಾಜ್‌ ಧಲಿವಾಲ್‌, ಕಾರ್ತಿಕಿ ಸಿಂಗ್‌ ಶಕ್ತಾವತ್ ಹಾಗೂ ಗಣೆಮತ್ ಶೆಕೋನ್ ಅವರನ್ನೊಳಗೊಂಡ ಭಾರತ ತಂಡವು 4–6ರಿಂದ ಕಜಕಸ್ತಾನದ ರಿನಾತ ನಾಸ್ಸಿರೊವಾ, ಓಲ್ಗಾ ಪನಾರಿನಾ ಹಾಗೂ ಜೋಯಾ ಕ್ರಾವ್‌ಚೆಂಕೊ ಅವರಿಗೆ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.