
ಮಂಗಳೂರು: ಕಂಬಳ ಮತ್ತು ಕರಾವಳಿ ಉತ್ಸವದ ಉತ್ಸಾಹದಲ್ಲಿ ಮಿಂದಿರುವ ದಕ್ಷಿಣ ಕನ್ನಡ ಜಿಲ್ಲೆ ಸೋಮವಾರದಿಂದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಮಿಂಚಿನ ಸಂಚಾರಕ್ಕೆ ಸಾಕ್ಷಿಯಾಗಲಿದೆ. ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಜ.16ರ ವರೆಗೆ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆಯಲು ಪಣತೊಟ್ಟು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಕ್ರೀಡಾಪಟುಗಳು ಇಲ್ಲಿಗೆ ಬಂದಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಕಳೆದ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ, ಈ ಬಾರಿ ಖೇಲೊ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಸಾಧನೆ ಮಾಡಿದವರು ಪ್ರಮುಖ ಆಕರ್ಷಣೆಯಾಗಿದ್ದಾರೆ.
ಕಳೆದ ಬಾರಿ ಸಮಗ್ರ ಚಾಂಪಿಯನ್ ಆಗಿದ್ದ ಮಂಗಳೂರು ವಿವಿ ಈ ಬಾರಿಯೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ರನ್ನರ್ ಅಪ್ ಆಗಿದ್ದ ಮದ್ರಾಸ್ ಮತ್ತು ಮೂರನೇ ಸ್ಥಾನ ಗಳಿಸಿದ್ದ ಪಂಜಾಬ್ ವಿವಿ ಮತ್ತೆ ಪ್ರಬಲ ಪೈಪೋಟಿಗೆ ಸಜ್ಜಾಗಿದೆ. ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ ಕಳೆದ ಬಾರಿ ಚಾಂಪಿಯನ್ ಆಗಿತ್ತು. ಮದ್ರಾಸ್ ವಿವಿ ಪುರುಷರ ವಿಭಾಗದ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತ್ತು. ಒಡಿಶಾದ ಕೆಐಐಟಿ, ಕೇರಳದ ಕ್ಯಾಲಿಕಟ್, ಪಂಜಾಬ್‌ನ ಗುರು ಕಾಶಿ ವಿಶ್ವವಿದ್ಯಾಲಯಗಳು ಕೂಡ ಗೆಲುವಿನ ಉತ್ಸಾಹದಲ್ಲಿವೆ. ವರ್ಷಗಳ ಹಿಂದೆ ಪಾರಮ್ಯ ಸಾಧಿಸುತ್ತಿದ್ದ ಕೇರಳದ ಎಂಜಿ ವಿವಿಯ ಸಾಮರ್ಥ್ಯ ಈಚೆಗೆ ಕಳೆಗುಂದಿದ್ದು ಮದ್ರಾಸ್ ವಿವಿ ಚೇತರಿಸಿಕೊಂಡಿದೆ. ಈ ಬಾರಿ ಖೇಲೊ ಇಂಡಿಯಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿರುವ ಮೊಹಾಲಿಯ ಚಂಡೀಗಢ ವಿವಿಗಳ ಮೇಲೆ ಅಥ್ಲೆಟಿಕ್ ಆಸಕ್ತರ ಕಣ್ಣುನೆಟ್ಟಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ಜಾಗತಿಕ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟ ಈ ಬಾರಿ ಇಲ್ಲ. ಆದ್ದರಿಂದ ಅದರಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸುವ ಇರಾದೆ ಅಥ್ಲೀಟ್‌ಗಳಿಗೆ ಇರುವುದಿಲ್ಲ. ಆದ್ದರಿಂದ ಇಲ್ಲಿ ಕಣಕ್ಕೆ ಇಳಿಯುವಾಗ ಪದಕ ಗೆಲ್ಲುವುದರೊಂದಿಗೆ ಖೇಲೊ ಇಂಡಿಯ ವಿವಿ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯೂ ಇರಲಿದೆ. ಹಲವರಿಗೆ ಭಾರತದ ಶಿಬಿರಗಳಿಗೆ ಇದು ಹೆಬ್ಬಾಗಿಲು ಆಗುವುದೂ ಇದೆ.
ಸ್ಯಾಫ್ ಗೇಮ್ಸ್‌ನ 110 ಮೀ ಹರ್ಡಲ್ಸ್‌ನಲ್ಲಿ ಪದಕ ಗೆದ್ದಿರುವ ಕೃಷಿಕ್ ಮಂಜುನಾಥ್, ಕಳೆದ ಬಾರಿ ಜಾಗತಿಕ ವಿವಿ ಚಾಂಪಿಯನ್‌ಷಿಪ್‌ನಲ್ಲಿ ಸಾಧನೆ ಮಾಡಿರುವ 5000 ಮೀ ಓಟಗಾರ್ತಿ ಜ್ಯೋತಿ, 10 ಸಾವಿರ ಮೀ ಓಟಗಾರ ಮೋಹಿತ್ ಚೌಧರಿ, ಶುಭಂ ಬಲಿಯಾನ್, ಜೂನಿಯರ್ ಇಂಡಿಯಾ ಕೂಟದ ಸಿಸ್ಕಸ್ ಥ್ರೋ ಸಾಧಕಿ ನಿಕಿತಾ ಕುಮಾರಿ, ಖೇಲೊ ಇಂಡಿಯಾದದಲ್ಲಿ ಚಿನ್ನ ಗೆದ್ದಿರುವ ಡೆಕಾಥ್ಲೀಟ್ ಚಮನ್‌ಜ್ಯೋತ್‌ಸಿಂಗ್, ಲಾಂಗ್‌ಜಂಪ್ ಪಟು ದೀಪಾಂಶಿ ಮುಂತಾದವರು ಪದಕದ ರೇಸ್‌ನಲ್ಲಿರುವ ಪ್ರಮುಖರು.
ಸೋಮವಾರ ಮುಂಜಾನೆ 6.30ಕ್ಕೆ ಆರಂಭವಾಗುವ ಪುರುಷರ 10 ಸಾವಿರ ಮೀಟರ್ಸ್ ಓಟದೊಂದಿಗೆ ಚಾಂಪಿಯನ್‌ಷಿಪ್‌ನ ಸ್ಪರ್ಧೆಗಳಿಗೆ ಚಾಲನೆ ಸಿಗಲಿದೆ. 7.05ಕ್ಕೆ ಮಹಿಳೆಯರ 10 ಸಾವಿರ ಮೀ ಫೈನಲ್ ಆರಂಭವಾಗಲಿದೆ. ಇವೆರಡೇ ಮೊದಲ ದಿನದ ಫೈನಲ್. ಮಧ್ಯಾಹ್ನ 3.10ಕ್ಕೆ ಮಹಿಳೆಯರ 800 ಮೀ ಸೆಮಿಫೈನಲ್‌ನೊಂದಿಗೆ ದಿನದ ಸ್ಪರ್ಧೆಗಳು ಮುಕ್ತಾಯಗೊಳ್ಳಲಿವೆ. ನಂತರ ಉದ್ಘಾಟನಾ ಸಮಾರಂಭ ನಡೆಯಲಿದೆ.
ಖೇಲೊ ಇಂಡಿಯಾ ಮತ್ತು ಅಂತರರಾಷ್ಟ್ರೀಯ ಅಂತರ ವಿವಿ ಕೂಟಕ್ಕೆ ಹೆಬ್ಬಾಗಿಲು ಆಗಿರುವ ಈ ಚಾಂಪಿಯನ್‌ಷಿಪ್‌ಗೆ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನಡೆಯಲಿದ್ದು ಫೊಟೊ ಫಿನಿಶ್ ತಂತ್ರಜ್ಞಾನ ಬಳಸಲಾಗುವುದು.ಡಾ.ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ
ಆಳ್ವಾಸ್‌ಗೆ 6ನೇ ಕೂಟ
ಆಳ್ವಾಸ್ ಶಿಕ್ಷಣ ಸಂಸ್ಥೆ ಆರನೇ ಬಾರಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಆಯೋಜಿಸುತ್ತಿದೆ. 72 75 80ನೇ ಕೂಟಗಳನ್ನು ರಾಜೀವ ಗಾಂಧಿ ವಿವಿ ಜೊತೆಯಲ್ಲೂ 79 ಮತ್ತು 81ನೇ ಕೂಟವನ್ನು ಮಂಗಳೂರು ವಿವಿ ಜೊತೆಯಲ್ಲೂ ಆಯೋಜಿಸಲಾಗಿತ್ತು. ಸೋಮವಾರದಿಂದ ನಡೆಯಲಿರುವುದು 85ನೇ ಕೂಟವಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಈ ಬಾರಿ ಒಟ್ಟು ₹20 ಲಕ್ಷ ನಗದು ಬಹುಮಾನ ನೀಡಲಾಗುವುದು. ಪ್ರಶಸ್ತಿ ಗೆದ್ದ ತಂಡಕ್ಕೆ ₹ 50 ಸಾವಿರ ರನ್ನರ್ ಅಪ್‌ಗೆ ₹ 30 ಸಾವಿರ ಮತ್ತು 3ನೇ ಸ್ಥಾನ ಪಡೆದ ತಂಡಕ್ಕೆ ₹ 20 ಸಾವಿರ ನೀಡಲಾಗುವುದು. ಕೂಟ ದಾಖಲೆ ನಿರ್ಮಿಸುವವರು ₹ 25 ಸಾವಿರ ಪಡೆದುಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.