ನವದೆಹಲಿ: ರಾಷ್ಟ್ರೀಯ ಕ್ರೀಡಾ ನೀತಿಯ ಕರಡು ಪ್ರತಿಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಇದನ್ನು ಮುಂದುವರಿದರೆ ಭಾರತದ ಮೇಲೆ ನಿಷೇಧ ಹೇರಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ಸರ್ಕಾರದ ಕ್ರಮಕ್ಕೆ ಭಾರತ ಒಲಿಂಪಿಕ್ ಸಂಸ್ಥೆಯೂ (ಐಒಎ) ಬೇಸರ ವ್ಯಕ್ತಪಡಿಸಿದೆ.
ಕೇಂದ್ರ ಕ್ರೀಡಾ ಇಲಾಖೆಯು ಅಕ್ಟೋಬರ್ 24ರಂದು ಭಾರತ ಒಲಿಂಪಿಕ್ ಸಂಸ್ಥೆಗೆ ಪತ್ರ ಬರೆದಿದ್ದು ಕ್ರೀಡಾ ನೀತಿಯ ಕರಡು ಪ್ರತಿಯ ಕುರಿತು ನವೆಂಬರ್ 10ರ ಒಳಗೆ ಅಭಿಪ್ರಾಯ ತಿಳಿಸುವಂತೆ ಕೋರಿತ್ತು. ಕರಡಿನಲ್ಲಿ ಮಾಡಿರುವ ಬದಲಾವಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದರು.
‘ಕರಡಿನಲ್ಲಿ ಬದಲಾವಣೆಗಳನ್ನು ಮಾಡುವ ಕ್ರಮವನ್ನು ಒಪ್ಪಿಕೊಳ್ಳಲು ಐಒಎ ಮತ್ತು ಸಂಬಂಧಪಟ್ಟ ಇತರ ಸಂಸ್ಥೆಗಳಿಗೆ ಸಾಧ್ಯವಿಲ್ಲ. ಐಒಸಿಯ ಅಧಿಕಾರ ವ್ಯಾಪ್ತಿಯಲ್ಲಿ ಕೈತೂರಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಕ್ರೀಡಾ ಇಲಾಖೆ ಅಂಥ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಭಾವಿಸುತ್ತೇನೆ’ ಎಂದು ಮೆಹ್ತಾ ಫೇಸ್‌ಬುಕ್‌ನಲ್ಲಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿ ಐಒಎಯನ್ನು 2012ರಲ್ಲಿ ಐಒಸಿ ಅಮಾನತು ಮಾಡಿತ್ತು. ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಯಲ್ಲಿ 14 ತಿಂಗಳ ನಂತರ ಅಮಾನತು ಹಿಂಪಡೆಯಲಾಗಿತ್ತು. 2011ರ ರಾಷ್ಟ್ರೀಯ ಕ್ರೀಡಾ ನೀತಿ ಈಗ ಜಾರಿಯಲ್ಲಿದ್ದು ಹೊಸ ನೀತಿಯ ಕರಡನ್ನು 2017ರಲ್ಲಿ ಸಿದ್ಧಪಡಿಸಲಾಗಿದೆ.
ಹೊಸ ನೀತಿಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದ್ದು ಸಚಿವರು, ಸಂಸದರು ಮತ್ತು ಶಾಸಕರು ಮತ್ತು ಸರ್ಕಾರಿ ನೌಕರರು ಕ್ರೀಡಾ ಫೆಡರೇಷನ್‌ಗಳಲ್ಲಿ ಮತ್ತು ಐಒಎದಲ್ಲಿ ಅಧಿಕಾರ ವಹಿಸಿಕೊಳ್ಳುವುದರಿಂದ ನಿರ್ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.