ADVERTISEMENT

ಐಒಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಥಾಮಸ್‌ ಬಾಕ್‌ಗೆ ಬೆಂಬಲ

ಪಿಟಿಐ
Published 15 ಅಕ್ಟೋಬರ್ 2023, 15:54 IST
Last Updated 15 ಅಕ್ಟೋಬರ್ 2023, 15:54 IST
<div class="paragraphs"><p>ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)  </p></div>

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)

   

ಮುಂಬೈ: ಥಾಮಸ್‌ ಬಾಕ್‌ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷನ ಹುದ್ದೆಯಲ್ಲಿ ಇನ್ನೊಂದು ಅವಧಿಗೆ ಮುಂದುವರಿಯಬೇಕು ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ.

ಐಒಸಿಯ 141ನೇ ಅಧಿವೇಶನ ಇಲ್ಲಿ ಆರಂಭವಾಗಿದ್ದು, ಮೊದಲ ದಿನವಾದ ಭಾನುವಾರ ಸದಸ್ಯರು ಈ ಒತ್ತಾಯ ಮಾಡಿದ್ದಾರೆ. ಜರ್ಮನಿಯ ಬಾಕ್‌ ಅವರು 2013 ರಲ್ಲಿ ಎಂಟು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2021ರ ಮಾರ್ಚ್‌ನಲ್ಲಿ ಅವರು ನಾಲ್ಕು ವರ್ಷಗಳ ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದರು.

ADVERTISEMENT

ಐಒಸಿ ರೂಪಿಸಿರುವ ನಿಯಮಗಳು (ಒಲಿಂಪಿಕ್‌ ಚಾರ್ಟರ್‌) ಅಧ್ಯಕ್ಷರ ಅಧಿಕಾರದ ಅವಧಿಯನ್ನು ಗರಿಷ್ಠ 12 ವರ್ಷಗಳಿಗೆ ಸೀಮಿತಗೊಳಿಸಿದೆ. ಹಿಂದಿನ ಅಧ್ಯಕ್ಷ ಜಾಕ್‌ ರಾಗ್ ಅವರ ಅವಧಿಯಲ್ಲಿ ಈ ನಿಯಮ ಜಾರಿಯಾಗಿತ್ತು.

ಬಾಕ್‌ ಅವರ ಅಧಿಕಾರದ ಅವಧಿ 2025 ರಲ್ಲಿ ಪೂರ್ಣಗೊಳ್ಳಲಿದ್ದು, ಈ ಹುದ್ದೆಯಲ್ಲಿ 12 ವರ್ಷ ಪೂರ್ಣಗೊಳಿಸಿದಂತಾಗುತ್ತದೆ. 2025ರ ಬಳಿಕವೂ ಅವರು ಅಧಿಕಾರದಲ್ಲಿ ಮುಂದುವರಿಯಬೇಕಾದರೆ ಒಲಿಂಪಿಕ್‌ ಚಾರ್ಟರ್‌ಗೆ ತಿದ್ದುಪಡಿ ತರಬೇಕಾಗುತ್ತದೆ. 99 ಸದಸ್ಯರಲ್ಲಿ ಬಹುತೇಕ ಮಂದಿ, ಬಾಕ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಸಮಿತಿಯ ಸದಸ್ಯರಿಗೆ ಧನ್ಯವಾದ ಸಲ್ಲಿಸಿದ ಬಾಕ್‌, ‘ನೀವು ಮಾಡಿರುವ ಮನವಿಯು ನನ್ನ ಹೃದಯಕ್ಕೆ ತಟ್ಟಿದೆ’ ಎಂದು ಹೇಳಿದರು.

ಐಒಸಿಯ ಮೂರು ದಿನಗಳ ಅಧಿವೇಶನ ಅ.17ರ ವರೆಗೆ ನಡೆಯಲಿದೆ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರಿದಂತೆ ಐದು ಹೊಸ ಕ್ರೀಡೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಮತದಾನ ಸೋಮವಾರ ನಡೆಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.