ADVERTISEMENT

21ರಂದು ಈಶ ಗ್ರಾಮೋತ್ಸವ ಫೈನಲ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 15:47 IST
Last Updated 20 ಸೆಪ್ಟೆಂಬರ್ 2025, 15:47 IST
ಈಶ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್
ಈಶ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್   

ಬೆಂಗಳೂರು: ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಎನಿಸಿರುವ ಈಶ ಗ್ರಾಮೋತ್ಸವದ 17ನೇ ಆವೃತ್ತಿಯ ಅಂತಿಮ ಪಂದ್ಯಗಳು ಇದೇ 21ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿಯ ಬಳಿ ಸಮ್ಮುಖದಲ್ಲಿ ನಡೆಯಲಿದೆ.

ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ ರಮೇಶ್‌ಬಾಬು, ಪ್ಯಾರಾಲಿಂಪಿಯನ್ ಭಾವಿನಾ ಪಟೇಲ್ ಅವರು ‘ಗ್ರ್ಯಾಂಡ್‌ ಫಿನಾಲೆ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದಿನ ಕಾರ್ಯಕ್ರಮಗಳು ಈಶ ಫೌಂಡೇಷನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.

ಪುರುಷರ ವಾಲಿಬಾಲ್‌ ಫೈನಲ್‌ನಲ್ಲಿ ಬೆಂಗಳೂರು ಗ್ರಾಮಾಂತರದ ಹೆಗ್ಗಡಿಹಳ್ಳಿಯ ಇಬ್ಬನಿ ತಂಡ ಮತ್ತು ಚಿಕ್ಕಬಳ್ಳಾಪುರ ಗ್ರಾಮಾಂತರದ ಮರಸನಹಳ್ಳಿ ಪಂಚಾಯಿತಿಯ ಅಪ್ಪು ಬಾಯ್ಸ್ ತಂಡಗಳು ಸೆಣಸಾಡಲಿವೆ. ಮಹಿಳೆಯರ ಥ್ರೋಬಾಲ್‌ ಫೈನಲ್‌ನಲ್ಲಿ ಕೊಡಗು ಮರಗೋಡಿನ ಬ್ಲ್ಯಾಕ್ ಪ್ಯಾಂಥರ್ಸ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ಶಾಸ್ತರ ಪಡುಮಲೆ–ಕುಡ್ಲಾ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗ್ರಾಮೋತ್ಸವವು ಒಟ್ಟು ₹67 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ.

ADVERTISEMENT

2025ರ ಆವೃತ್ತಿಯ ಕ್ರೀಡಾ ಉತ್ಸವವು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ ಆರು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಿತು. 12,000ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಂತೆ ಒಟ್ಟು 63,220 ಆಟಗಾರರು ಪಾಲ್ಗೊಂಡರು. ಕರ್ನಾಟಕದ 18 ಜಿಲ್ಲೆಗಳಿಂದ 7,200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ಈಶ ಫೌಂಡೇಷನ್‌ ಪ್ರಕಟಣೆ ತಿಳಿಸಿದೆ.


2004ರಲ್ಲಿ ಸದ್ಗುರುಗಳು ಚಾಲನೆ ನೀಡಿದ ಈಶ ಗ್ರಾಮೋತ್ಸವವು ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೆ ಮತ್ತು ಆಟದ ಮನೋಭಾವವನ್ನು ತರುವ ಉದ್ದೇಶದಿಂದ ಆರಂಭಿಸಲಾಗಿದೆ. ತನ್ನ ವಿಶಿಷ್ಟ ರೂಪದಲ್ಲಿ ಈಶ ಗ್ರಾಮೋತ್ಸವವು ವೃತ್ತಿಪರರಿಗಲ್ಲದೇ, ಜನಸಾಮಾನ್ಯ ಗ್ರಾಮೀಣ ಜನರಾದ ದಿನಗೂಲಿ ಕಾರ್ಮಿಕರು, ಮೀನುಗಾರರು ಮತ್ತು ಗೃಹಿಣಿಯರು ಸೇರಿದಂತೆ ಇತರರಿಗೆ ತಮ್ಮ ದೈನಂದಿನ ಕಾರ್ಯಗಳಿಂದ ಬಿಡುಗಡೆ ಪಡೆದು ಕ್ರೀಡೆಯ ಸಂಭ್ರಮ ಮತ್ತು ಐಕ್ಯತೆಯ ಶಕ್ತಿಯನ್ನು ಆನಂದಿಸಲು ವೇದಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.