
ನವದೆಹಲಿ: ಭಾರತದ ಉದಯೋನ್ಮುಖ ಶೂಟರ್ ಜೊನಾಥನ್ ಗ್ಯಾವಿನ್ ಆ್ಯಂಟನಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಟೂರ್ನಿಯ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿ ಇಟ್ಟರು.
ಟೂರ್ನಿಯ ಎರಡನೇ ದಿನವಾದ ಶುಕ್ರವಾರ ನಡೆದ ಫೈನಲ್ ಸುತ್ತಿನಲ್ಲಿ ಜೊನಾಥನ್ ಅವರು 244.8 ಪಾಯಿಂಟ್ಸ್ ಸಂಪಾದಿಸಿದರು. ಇಟಲಿಯ ಲ್ಯೂಕಾ ಅರಿಘಿ (236.3) ಹಾಗೂ ಸ್ಪೇನ್‌ನ ಲ್ಯೂಕಾಸ‌್ ಸ್ಯಾಂಚೆಝ್ ಟೋಮ್ (215.1) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.
ಕ್ವಾಲಿಫಿಕೇಶನ್ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತದ ಚಿರಾಗ್ ಶರ್ಮಾ ಅವರು, ಫೈನಲ್ ಹಣಾಹಣಿಯಲ್ಲಿ ನೀರಸ ಪ್ರದರ್ಶನದೊಂದಿಗೆ (115.6) ಎಂಟನೇ ಹಾಗೂ ಕೊನೆಯ ಸ್ಥಾನ ಪಡೆದರು.
ರಜತ ಗೆದ್ದ ರಶ್ಮಿಕಾ: ಜೂನಿಯರ್ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ರಶ್ಮಿಕಾ ಸೆಹಗಲ್ ಅವರು 236.1 ಪಾಯಿಂಟ್ಸ್‌ಗಳೊಡನೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಎವಿಲಿನಾ ಶೀನಾ (240.9) ಸ್ವರ್ಣ ಗೆದ್ದರೆ, ಇರಾನ್‌ನ ಫಾತಿಮಾ ಶೆಕರಿ (213.8) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಆದರೆ, ಕ್ವಾಲಿಫಿಕೇಶನ್ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದ ವಂಶಿಕಾ ಚೌಧರಿ ಹಾಗೂ ಮೋಹಿನಿ ಸಿಂಗ್ ಅವರು ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ವಂಶಿಕಾ (174.2) ಅವರು 5ನೇ ಸ್ಥಾನ ಪಡೆದರೆ, ಮೋಹಿನಿ (153.2) ಅವರು 6ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.