
ಕುಮಾಮೊಟೊ (ಜಪಾನ್): ಭಾರತದ ಲಕ್ಷ್ಯ ಸೇನ್ ಅವರು ಕುಮಾಮೊಟೊ ಮಾಸ್ಟರ್ಸ್ ಜಪಾನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಪಾನ್‌ನ ಕೋಕಿ ವತಾನಬೆ ಅವರನ್ನು ಬುಧವಾರ ನೇರ ಆಟಗಳಲ್ಲಿ ಸೋಲಿಸಿದರು.
ಏಳನೇ ಶ್ರೇಯಾಂಕದ ಲಕ್ಷ್ಯ 21–12, 21–16 ರಿಂದ ವತಾನಬೆ ಅವರನ್ನು ಕೇವಲ 39 ನಿಮಿಷಗಳಲ್ಲಿ ಸೋಲಿಸಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು.
ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಲಕ್ಷ್ಯ ಮುಂದಿನ ಸುತ್ತಿನಲ್ಲಿ ಸಿಂಗಪುರದ ಜಿಯಾ ಹೆಂಗ್ ಜೇಸನ್ ಅವರನ್ನು ಎದುರಿಸಲಿದ್ದಾರೆ. ಜಿಯಾ ಅವರು ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ 21–18, 15–21, 21–17 ರಿಂದ ಕೆನಡಾದ ವಿಕ್ಟರ್ ಲೈ ಅವರನ್ನು ಸೋಲಿಸಿದರು.
ಆದರೆ ಕಿರಣ್ ಜಾರ್ಜ್ ಮತ್ತು ಆಯುಷ್ ಶೆಟ್ಟಿ ಅವರ ಸವಾಲು ಬಲುಬೇಗ ಅಂತ್ಯಗೊಂಡಿತು. ಕಿರಣ್ ಅವರು ಮಲೇಷ್ಯಾದ ಜಿಂಗ್ ಹಾಂಗ್ ಕೊಕ್ ಅವರಿಗೆ 20–22, 10–21ರಲ್ಲಿ ಸೋತರು. ನಾಲ್ಕನೇ ಶ್ರೇಯಾಂಕದ ಕೊಡೈ ನರವೋಕಾ 21–16, 21–11 ರಿಂದ ಆಯುಷ್ ಶೆಟ್ಟಿ ಅವರನ್ನು ಮಣಿಸಿದರು. ನರವೋಕಾ ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಕಪೂರ್– ರುತ್ವಿಕಾ ಶಿವಾನಿ ಗದ್ದೆ ಜೋಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತು. ಅಮೆರಿಕದ ಪ್ರೆಸ್ಲಿ ಸ್ಮಿತ್– ಜೆನ್ನಿ ಗೈ ಜೋಡಿ 21–12, 19–21, 22–20 ರಿಂದ ಭಾರತದ ಜೋಡಿಯ ಮೇಲೆ ಜಯಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.