ADVERTISEMENT

ಜೆರೆಮಿಗೆ ಚಿನ್ನ; ಗುರುರಾಜ್‌ಗೆ ಬೆಳ್ಳಿ

ಕಜಕಸ್ತಾನದ ತಾಷ್ಕೆಂಟ್‌ನಲ್ಲಿ ಕಾಮನ್ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 20:46 IST
Last Updated 10 ಡಿಸೆಂಬರ್ 2021, 20:46 IST
ಜೆರೆಮಿ ಲಾಲ್‌ರಿನ್ವಾಂಗ –ರಾಯಿಟರ್ಸ್ ಚಿತ್ರ
ಜೆರೆಮಿ ಲಾಲ್‌ರಿನ್ವಾಂಗ –ರಾಯಿಟರ್ಸ್ ಚಿತ್ರ   

ತಾಷ್ಕೆಂಟ್‌, ಕಜಕಸ್ತಾನ: ಭಾರತದ ಜೆರೆಮಿ ಲಾಲ್‌ರಿನ್ವಾಂಗ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 67 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಕರ್ನಾಟಕದ ಗುರುರಾಜ್ ಪೂಜಾರಿ 61 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಜೆರೆಮಿ ಒಟ್ಟು 305 ಕೆಜಿ (141 ಕೆಜಿ ಮತ್ತು 164 ಕೆಜಿ) ಭಾರ ಎತ್ತಿದರು. 19 ವರ್ಷದ ಜೆರೆಮಿ ಸ್ನ್ಯಾಚ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದರು. ಆದರೆ ಅವರಿಗೆ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮೀರಲು ಆಗಲಿಲ್ಲ. 2019ರಲ್ಲಿ ಅವರು 306 ಕೆಜಿ (140 ಕೆಜಿ+166 ಕೆಜಿ) ಸಾಧನೆ ಮಾಡಿದ್ದರು. 2018ರ ಯೂತ್ ಒಲಿಂಪಿಕ್ಸ್‌ನಲ್ಲೂ ಅವರು ಚಿನ್ನ ಗೆದ್ದಿದ್ದರು. ಏ‍ಪ್ರಿಲ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೊಣಕಾಲು ನೋವಿನಿಂದ ಬಳಲಿದ್ದರು.

ಕುಂದಾಪುರದ ಗುರುರಾಜ ಪೂಜಾರಿ ಅವರು ಗುರುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಒಟ್ಟು 265 ಕೆಜಿ (117 ಕೆಜಿ+148 ಕೆಜಿ) ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 61ಕೆಜಿ ವಿಭಾಗದಲ್ಲಿ ಇದೇ ಮೊದಲ ಬಾರಿ ಅವರು ಕಣಕ್ಕೆ ಇಳಿದಿದ್ದಾರೆ.

ADVERTISEMENT

ಮಹಿಳಾ ವಿಭಾಗದ 55 ಕೆಜಿ ಎಸ್‌.ವಿದ್ಯಾರಾಣಿ198 ಕೆಜಿ (84ಕೆಜಿ+114ಕೆಜಿ) ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗಳಿಸಿದರು. ನೈಜೀರಿಯಾದ ಅದಿಜತ್ ಒಲರಿನೊಯೆ 203 ಕೆಜಿ ಸಾಧನೆಯೊಂದಿಗೆ ಚಿನ್ನ ಗೆದ್ದುಕೊಂಡರು. ಇಲ್ಲೇ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.