ADVERTISEMENT

ಮಕಾವ್‌ ಓಪನ್‌ ಸ್ಕ್ವಾಷ್‌ ಟೂರ್ನಿ: ಸೆಮಿಗೆ ಜೋಷ್ನಾ

ಪಿಟಿಐ
Published 12 ಏಪ್ರಿಲ್ 2019, 20:15 IST
Last Updated 12 ಏಪ್ರಿಲ್ 2019, 20:15 IST
ಭಾರತದ ಜೋಷ್ನಾ ಚಿಣ್ಣಪ್ಪ
ಭಾರತದ ಜೋಷ್ನಾ ಚಿಣ್ಣಪ್ಪ   

ಮಕಾವ್‌: ಭಾರತದ ಜೋಷ್ನಾ ಚಿಣ್ಣಪ್ಪ, ಮಕಾವ್‌ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಜೋಷ್ನಾ 11–8, 11–2, 11–9 ನೇರ ಗೇಮ್‌ಗಳಿಂದ ಈಜಿಪ್ಟ್‌ನ ಮಯರ್‌ ಹ್ಯಾನಿ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಜೋಷ್ನಾ, ಮೊದಲ ಗೇಮ್‌ನ ಆರಂಭದಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ನಂತರ ಭಾರತದ ಆಟಗಾರ್ತಿ ಮೋಡಿ ಮಾಡಿದರು. ಆಕರ್ಷಕ ಡ್ರಾಪ್‌ ಮತ್ತು ಚುರುಕಿನ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಹೊಂದಿದ್ದ ಹ್ಯಾನಿ, ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಜೋಷ್ನಾ, ಸತತವಾಗಿ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು ಸುಲಭವಾಗಿ ಈಜಿಪ್ಟ್‌ ಆಟಗಾರ್ತಿಯ ಸವಾಲು ಮೀರಿದರು.

ಮೂರನೇ ಗೇಮ್‌ನ ಶುರುವಿನಿಂದಲೇ ಉಭಯ ಆಟಗಾರ್ತಿಯರು ಚುರುಕಿನ ಪೈಪೋಟಿ ನಡೆಸಿದರು. ಹೀಗಾಗಿ 9–9 ಸಮಬಲ ಕಂಡುಬಂತು. ನಿರ್ಣಾಯಕ ಘಟ್ಟದಲ್ಲಿ ಒತ್ತಡ ಮೀರಿ ನಿಂತು ಆಡಿದ ಜೋಷ್ನಾ ಪಂದ್ಯ ಗೆದ್ದು ಸಂಭ್ರಮಿಸಿದರು.

ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದ ಭಾರತದ ಆಟಗಾರ್ತಿ, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಅಮಂಡಾ ಲ್ಯಾಂಡರ್ಸ್‌ ಮರ್ಫಿ ಅವರನ್ನು ಮಣಿಸಿದ್ದರು.

ಜೋಷ್ನಾ 11–5, 11–8, 11–9 ನೇರ ಗೇಮ್‌ಗಳಿಂದ ಮರ್ಫಿ ಎದುರು ಗೆದ್ದಿದ್ದರು.

ಸೌರವ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಸೌರವ್‌ ಘೋಷಾಲ್‌, ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಕಂಡರು.

ಸ್ಕಾಟ್ಲೆಂಡ್‌ನ ಆರನೇ ಶ್ರೇಯಾಂಕದ ಆಟಗಾರ ಗ್ರೇಗ್ ಲೋಬನ್‌ 6–11, 11–8, 11–5, 11–8ರಲ್ಲಿ ಭಾರತದ ಆಟಗಾರನನ್ನು ಮಣಿಸಿದರು.

ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆದ್ದ ಸೌರವ್, ನಂತರದ ಮೂರು ಗೇಮ್‌ಗಳಲ್ಲೂ ನಿರಾಸೆ ಕಂಡರು.

ಇದಕ್ಕೂ ಮುನ್ನ ನಡೆದಿದ್ದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಸೌರವ್‌ 9–11, 11–7, 10–12, 11–2, 11–9ರಲ್ಲಿ ಭಾರತದ ಮಹೇಶ್‌ ಮನಗಾಂವ್ಕರ್‌ ಅವರನ್ನು ಸೋಲಿಸಿದ್ದರು. ಈ ಹೋರಾಟ 77 ನಿಮಿಷ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.