ADVERTISEMENT

ಬಿಸಿಲುನಾಡಿನಲ್ಲಿ ಅರಳುತಿವೆ ಒಲಿಂಪಿಕ್ಸ್ ಕನಸುಗಳು

ಗಿರೀಶದೊಡ್ಡಮನಿ
Published 12 ಡಿಸೆಂಬರ್ 2021, 3:59 IST
Last Updated 12 ಡಿಸೆಂಬರ್ 2021, 3:59 IST
ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯು ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ (ಐಐಎಸ್) ಆವರಣದಲ್ಲಿ ಕಂಡ ಕ್ರೀಡಾ ಕಲಾಕೃತಿಗಳು
ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯು ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ (ಐಐಎಸ್) ಆವರಣದಲ್ಲಿ ಕಂಡ ಕ್ರೀಡಾ ಕಲಾಕೃತಿಗಳು   

‘ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಲು ಬಯಸುವ ಒಬ್ಬ ಅಥ್ಲೀಟ್‌ಗೆ ಬೇಕಾದ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಸಿಗುತ್ತಿರುವ ಸ್ಥಳ ಇದು. ಇಲ್ಲಿ ಎಲ್ಲವೂ ಇದೆ. ಇಲ್ಲಿಗೆ ಬಂದ ಮೇಲೆ ನನ್ನ ಜೀವನದ ದಿಕ್ಕು ಬದಲಾಗಿದೆ. ದೊಡ್ಡಮಟ್ಟದ ಸಾಧನೆ ಮಾಡುವ ಆತ್ಮವಿಶ್ವಾಸ ಮೂಡಿದೆ’

ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯು ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ (ಐಐಎಸ್) ಬಾಕ್ಸಿಂಗ್ ರಿಂಗ್‌ನಲ್ಲಿ ತಮ್ಮ ಕೈಗಳ ಗ್ಲೌಸ್‌ ಸರಿಪಡಿಸಿಕೊಳ್ಳುತ್ತಿದ್ದ ವೈಶಾಖ ಹೇಳಿದ ಮಾತುಗಳಿವು. ಬೆಂಗಳೂರಿನ ಪ್ರತಿಭೆ ವೈಶಾಖ ಸದ್ಯ ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಭರವಸೆಯ ಬಾಕ್ಸರ್. ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ವೈಶಾಖ ಅವರೊಂದಿಗೆ ಜೇಕಬ್ ಬೆಂಗಳೂರಿನ ಮತ್ತೊಬ್ಬ ಬಾಕ್ಸರ್. ‘ಕ್ರೀಡೆಯಲ್ಲಿ ಉನ್ನತ ಸಾಧನೆಗಾಗಿ ಬೇರೆ ಬೇರೆ ಊರುಗಳಿಂದ ಜನರು ಬೆಂಗಳೂರಿಗೆ ಬರುತ್ತಾರೆ. ಆದರೆ, ನಾವು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇವೆ. ಇದೊಂದು ಅದ್ಭುತವಾದ ತಾಣ’ ಎನ್ನುತ್ತಾರೆ ಜೇಕಬ್.

ಒಲಿಂಪಿಕ್ಸ್‌ ಪದಕದ ಕನಸು ಬಿತ್ತುತ್ತಿರುವ ತೋರಣಗಲ್ಲಿನ ಜೆಎಸ್‌ಡಬ್ಲ್ಯೂ ಕ್ರೀಡಾ ಸಂಕೀರ್ಣದ ನೋಟ
ಪ್ರಜಾವಾಣಿ ಚಿತ್ರಗಳು:ಬಿ.ಎಚ್‌. ಶಿವಕುಮಾರ್‌

ಇವರಿಬ್ಬರ ತರಹ ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ತರಬೇತಿ ಪಡೆಯುತ್ತಿರುವ 140 ಉದಯೋನ್ಮುಖ ಪ್ರತಿಭೆಗಳು ಇಲ್ಲಿವೆ. ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಯ ಕನಸು ಕಾಣುವ ಹದಿಹರೆಯದ ಹುಡುಗ–ಹುಡುಗಿಯರ ದೊಡ್ಡ ದಂಡು ಇಲ್ಲಿದೆ. ಕಠಿಣ ಕಸರತ್ತು ಮಾಡುತ್ತ, ಮೈತುಂಬಾ ಬೆವರು ಸುರಿಸುತ್ತ ಆತ್ಮವಿಶ್ವಾಸದ ಮುಗುಳ್ನಗು ಚೆಲ್ಲುವ ಈ ಉದಯೋನ್ಮುಖ ಕ್ರೀಡಾಪಟುಗಳ ಕಂಗಳಲ್ಲಿ ಪದಕದ ಹೊಳಪು ಇಣುಕುತ್ತದೆ.

ADVERTISEMENT

2017–18ರಲ್ಲಿ ಜಿಂದಾಲ್ ಸೌಥ್ ವೆಸ್ಟ್ ಲಿಮಿಟೆಡ್‌ನ ಔದ್ಯಮಿಕ ಟೌನ್‌ಷಿಪ್‌ನಲ್ಲಿ ಐಐಎಸ್ ನಿರ್ಮಾಣಗೊಂಡಿದೆ. ಜೆಎಸ್‌ಡಬ್ಲ್ಯುನ ಪಾರ್ಥ್ ಜಿಂದಾಲ್ ಅವರ ಕನಸಿನ ಕೂಸು ಇದು. ಆರಂಭವಾಗಿ ನಾಲ್ಕು ವರ್ಷಗಳಲ್ಲಿಯೇ ಜಗದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 42 ಎಕರೆ ಪ್ರದೇಶದಲ್ಲಿ ಅರಳಿ ನಿಂತಿರುವ ಈ ಸಂಸ್ಥೆಯ ಮೂಲ ಉದ್ದೇಶವೇ ಒಲಿಂಪಿಕ್ಸ್ ಮಟ್ಟದ ಸ್ಪರ್ಧಿಗಳನ್ನು ಸಿದ್ಧಗೊಳಿಸುವುದು. ಅದಕ್ಕಾಗಿ ಸಕಲ ಸೌಲಭ್ಯಗಳನ್ನೂ ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಥ್ಲೆಟಿಕ್ಸ್, ಕುಸ್ತಿ, ಜುಡೊ ಮತ್ತು ಬಾಕ್ಸಿಂಗ್ ಕ್ರೀಡೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ.

ಕ್ರೀಡಾ ಸಂಕೀರ್ಣದಲ್ಲಿ ಕಾಣಸಿಗುವ ನಿತ್ಯದ ನೋಟ

ಅಷ್ಟೇ ಅಲ್ಲ. ಜೆಎಸ್‌ಡಬ್ಲ್ಯು ಮಾಲೀಕತ್ವ ಹೊಂದಿರುವ ಐಎಸ್‌ಎಲ್ ತಂಡ ಬೆಂಗಳೂರು ಫುಟ್‌ಬಾಲ್ ಕ್ಲಬ್, ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪ್ರೊ ಕಬಡ್ಡಿ ಲೀಗ್‌ನ ಹರಿಯಾಣ ಸ್ಟೀಲರ್ಸ್‌ ಆಟಗಾರರು ಪೂರ್ವಭಾವಿ ತರಬೇತಿಗಾಗಿ ಇಲ್ಲಿ ಬರುತ್ತಾರೆ.

ಟೋಕಿಯೊ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ, ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಅಂತರರಾಷ್ಟ್ರೀಯ ಬಾಕ್ಸರ್‌ಗಳ ಕೌಶಲಗಳಿಗೆ ಇಲ್ಲಿ ಸಾಣೆ ಹಿಡಿಯಲಾಗಿದೆ. ಈಗಲೂ ಅವರಿಗೆ ಐಐಎಸ್‌ ಬೆಂಬಲವಾಗಿ ನಿಂತಿದೆ. ಅದರೊಂದಿಗೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಪ್ರತಿಭೆಗಳನ್ನು ಹುಡುಕಿ ಕರೆತಂದು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಕ್ರೀಡೆಯ ಜೊತೆಗೆ ಶಿಕ್ಷಣ, ವೈದ್ಯಕೀಯ ನೆರವು ಮತ್ತು ಪೌಷ್ಟಿಕ ಆಹಾರೋಪಚಾರವನ್ನೂ ಇಲ್ಲಿ ನೀಡಲಾಗುತ್ತಿದೆ. ಇದೆಲ್ಲವೂ ಉಚಿತ.

ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ (ಐಐಎಸ್)ಜಿಮ್‌ ಕೇಂದ್ರ

ಐಐಎಸ್‌ನಲ್ಲಿ ಏನೇನಿದೆ?: ಇಲ್ಲಿರುವ ವಿಶಾಲವಾದ ಜಿಮ್ನಾಷಿಯಂನಲ್ಲಿ ಏಕಕಾಲಕ್ಕೆ 50–60 ಜನ ಅಭ್ಯಾಸ ಮಾಡಬಹುದು. ಪ್ರತಿಯೊಂದು ಕ್ರೀಡೆಗೆ ಬೇಕಾದ ಪ್ರತ್ಯೇಕ ವ್ಯಾಯಾಮಗಳಿಗೆ ಅನುಕೂಲವಾಗುವಂತಹ ಸಲಕರಣೆಗಳು ಇಲ್ಲಿವೆ.

ಕಾಂಬ್ಯಾಟ್ ಸ್ಪೋರ್ಟ್ಸ್‌ ವಿಭಾಗದ ಕಟ್ಟಡದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಮ್ಯಾಟ್‌ಗಳಿರುವ ಕುಸ್ತಿ ಕಣ, ಬಾಕ್ಸಿಂಗ್ ರಿಂಗ್ ಮತ್ತು ಜೂಡೊ ಅಭ್ಯಾಸದ ಅರೆನಾ ಇವೆ. ಅದರ ಹಿಂದಿನ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಸೌಲಭ್ಯಗಳಿವೆ. ಒಲಿಂಪಿಕ್ ದರ್ಜೆಯ ಈಜುಕೊಳದ ನಿರ್ಮಾಣ ಭರದಿಂದ ಸಾಗುತ್ತಿದೆ.

ಮೂಲಸೌಲಭ್ಯಗಳಷ್ಟೇ ಅಲ್ಲ. ತರಬೇತಿ ವಿಷಯದಲ್ಲಿಯೂ ಇಲ್ಲಿ ವೃತ್ತಿಪರತೆ ಇದೆ. ಉನ್ನತ ಸಾಧಕರನ್ನೇ ಇಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕುಸ್ತಿ ಕಣದಲ್ಲಿ ಕಾಲಿಟ್ಟರೆ, ಪುಷ್ಪಶೋಭಿತ ಹನುಮನ ವಿಗ್ರಹಕ್ಕೆ ನಮಿಸುವ ಮಹಿಳಾ ಕುಸ್ತಿಪಟುಗಳು, ಇಲ್ಲಿ ಕೋಚ್ ಆಗಿರುವ 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವಿಜೇತ ಕ್ಯೂಬಾದ ಯಾಂಡ್ರೊ ಕ್ವಿಂಟಾನಾ ಅವರ ಖಡಕ್ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಾರೆ. ಇನ್ನೊಂದೆಡೆ ಇರಾನಿನ ಚಾಂಪಿಯನ್ ಕುಸ್ತಿ ಕೋಚ್ ಆಮಿರ್ ತವಾಕೊಲಿಯನ್ ಮಾರ್ಗದರ್ಶನದಲ್ಲಿ ಪುರುಷ ಕುಸ್ತಿಪಟುಗಳು ಅಥ್ಲೆಟಿಕ್ಸ್ ಅಂಗಳದಲ್ಲಿ ವ್ಯಾಯಾಮ, ಆಟೋಟಗಳಲ್ಲಿ ತೊಡಗಿ ತಮ್ಮ ಮಾಂಸಖಂಡಗಳಿಗೆ ಕಸುವು ತುಂಬಿಕೊಳ್ಳುತ್ತಾರೆ.

ಆಧುನಿಕ ಕಾಲದ ಕ್ರೀಡೆಯಲ್ಲಿ ಒಬ್ಬ ಕ್ರೀಡಾಪಟು ಸಿದ್ಧವಾಗಲು ದೈಹಿಕ ತರಬೇತಿಯಷ್ಟೇ ಸಾಕಾಗುವುದಿಲ್ಲ. ಅದಕ್ಕೆ ಪೂರಕವಾಗಿ ಹಲವು ಕೈಗಳು ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಮನೋವೈದ್ಯರು, ಫಿಸಿಯೊಥೆರಪಿಸ್ಟ್, ಪೌಷ್ಟಿಕ ಆಹಾರ ತಜ್ಞರು ಮತ್ತು ಸ್ಟ್ರೆಂಥ್–ಕಂಡಿಷನಿಂಗ್ ಪರಿಣತರು ಕೂಡ ಇಲ್ಲಿದ್ದಾರೆ.

‘ಕ್ರೀಡಾಪಟುಗಳ ಸಾಮರ್ಥ್ಯ ನಿರ್ವಹಣೆ ಚೆನ್ನಾಗಿರಬೇಕಾದರೆ ಅವರು ಗಾಯಗೊಂಡಾಗ ಸೂಕ್ತ ಚಿಕಿತ್ಸೆ ಮತ್ತು ಪುನಃಶ್ಚೇತನ ನೀಡುವುದು ಒಂದು ಕ್ರಮ. ಅದಕ್ಕಿಂತ ಮುಖ್ಯವಾಗಿ ಅವರು ಗಾಯಗೊಳ್ಳದಂತೆ ಸಬಲರನ್ನಾಗಿರಿಸುವುದು ಮತ್ತೊಂದು ಕ್ರಮ. ಈ ಎರಡೂ ಪದ್ಧತಿಗಳನ್ನು ನಾವು ಇಲ್ಲಿ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಗಾಯಗಳಿಂದ ರಕ್ಷಿಸಿಕೊಂಡು ಸದೃಢಗೊಳ್ಳುವ ವಿಧಾನಗಳನ್ನು ಇಲ್ಲಿಯ ಅಥ್ಲೀಟ್‌ಗಳಿಗೆ ಮಾರ್ಗದರ್ಶನ ಮಾಡುತ್ತೇವೆ. ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ, ಮಾನಸಿಕ ಸಾಮರ್ಥ್ಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅವರಿಗೆ ಚಿಕಿತ್ಸೆ, ಆರೈಕೆ ಮತ್ತು ಆಹಾರ ಕ್ರಮಗಳ ಕುರಿತು ತಿಳಿವಳಿಕೆ ನೀಡಲಾಗುತ್ತದೆ. ಔಷಧೋಪಚಾರದ ಕುರಿತು ಸೂಕ್ತ ತಿಳಿವಳಿಕೆ ನೀಡುತ್ತೇವೆ’ ಎಂದು ಇಲ್ಲಿಯ ಫಿಸಿಯೊಥೆರಪಿ ವಿಭಾಗದ ಮುಖ್ಯಸ್ಥ ಧನಂಜಯ್ ಕೌಶಿಕ್ ವಿವರಿಸುತ್ತಾರೆ.

ಇಲ್ಲಿರುವ ಅಚ್ಚುಕಟ್ಟಾದ ಊಟದ ಮನೆಯಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದವರಿಗಾಗಿ ಸಿದ್ಧಪಡಿಸಲಾದ ಎಲ್ಲ ವಿಧದ ಆಹಾರಗಳೂ ಲಭ್ಯ. ಆದರೆ, ಪೌಷ್ಟಿಕ ಆಹಾರ ತಜ್ಞರು ತಮಗೆ ನೀಡಿದ ಡಯಟ್ ಸೂಚಿಯ ಪ್ರಕಾರವೇ ಅಥ್ಲೀಟ್‌ಗಳು ಆಹಾರ ಆಯ್ಕೆ ಮಾಡಿಕೊಳ್ಳುತ್ತಾರೆ.

ಪ್ಯಾರಿಸ್ ಕೌಂಟ್‌ಡೌನ್... ಐಐಎಸ್‌ನ ಆಡಳಿತ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿರುವ ದೊಡ್ಡದೊಂದು ಡಿಜಿಟಲ್ ಗಡಿಯಾರದಲ್ಲಿ 2024ರ ಒಲಿಂಪಿಕ್ಸ್‌ನ ಕೌಂಟ್‌ಡೌನ್‌ ನಡೆಯುತ್ತಿದೆ. ಈ ಗಡಿಯಾರದಲ್ಲಿ ಪ್ರತಿಕ್ಷಣವೂ ಬದಲಾಗುವ ಅಂಕಿಗಳು ಇಲ್ಲಿಯುವ ಯುವಹೃದಯಗಳಲ್ಲಿ ಸಾಧನೆಯ ಹಸಿವು ಹೆಚ್ಚಿಸುತ್ತಿವೆ. ಅದಕ್ಕಾಗಿ ಮತ್ತಷ್ಟು, ಮಗದಷ್ಟು ಶ್ರಮವಹಿಸಿ ಅಭ್ಯಾಸ ಮಾಡಲು ಪ್ರೇರಣೆ ಸಿಗುತ್ತಿದೆ.

‘ವಿಶ್ವದ ಬೇರೆಲ್ಲ ಅಥ್ಲೀಟ್‌ಗಳಿಗೆ ಸರಿಸಮನಾದ ಪ್ರತಿಭೆಗಳು ಭಾರತದಲ್ಲಿಯೂ ಇವೆ. ಆದರೆ ಅವರಿಗೆ ಸೂಕ್ತ ಸಮಯಕ್ಕೆ ಸರಿಯಾದ ಪೋಷಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಕೊಡಬೇಕು. ಅದು ಇಲ್ಲಿ ಸಿಗುತ್ತದೆ’ ಎಂದು ಡಿಜಿಟಲ್ ಗಡಿಯಾರದ ಮುಂದೆ ನಿಂತಿದ್ದ ಬಾಕ್ಸಿಂಗ್ ಮುಖ್ಯಕೋಚ್, ಇಂಗ್ಲೆಂಡ್‌ನ ಜಾನ್ ವರ್ಬರ್ಟನ್ ನುಡಿಗಳಲ್ಲಿ ಭಾರತದ ಕ್ರೀಡೆಯ ಭವ್ಯ ಭವಿಷ್ಯದ ಭರವಸೆ ಎದ್ದು ಕಾಣುವಂತದ್ದು.

ಇದೇ ಕಟ್ಟಡದ ಮುಂಭಾಗದಲ್ಲಿರುವ ನೀರಜ್ ಚೋಪ್ರಾ ಮಾರ್ಗದಲ್ಲಿ ಪ್ರತಿದಿನ ಹೆಜ್ಜೆ ಹಾಕುವ ಹುಡುಗ–ಹುಡುಗಿಯರ ಕಂಗಳಲ್ಲಿ ಪದಕದ ಹೊಳಪು ಇಣುಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.