ನ್ಯೂಯಾರ್ಕ್: ಭಾರತದ ಅರ್ಜುನ್ ಎರಿಗೈಸಿ ಮತ್ತು ಆರ್. ಪ್ರಗ್ನಾನಂದ ಅವರು ಜೂಲಿಯಸ್ ಬಾರ್ ಜೆನರೇಷನ್ ಕಪ್ ಚೆಸ್ ಟೂರ್ನಿಯ ಪ್ರಿಲಿಮನರಿ ಹಂತದ 12ನೇ ಸುತ್ತಿನ ಅಂತ್ಯಕ್ಕೆ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದರು.
ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ 25 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಎರಿಗೈಸಿ 24 ಪಾಯಿಂಟ್ಸ್ ಕಲೆಹಾಕಿದ್ದಾರೆ. ಚೀನಾದ ಕ್ವಾಂಗ್ ಲಿಯೆಮ್ ಲಿ (20) ಮೂರನೇ ಸ್ಥಾನದಲ್ಲಿದ್ದರು.
19 ವರ್ಷದ ಅರ್ಜುನ್, ಟೂರ್ನಿಯ ಮೂರನೇ ದಿನವಾದ ಬುಧವಾರ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದರು. ಮೊದಲ ಪಂದ್ಯದಲ್ಲಿ ಉಕ್ರೇನ್‌ನ ವಾಸಿಲ್ ಇವಾಂಚುಕ್ ಅವರನ್ನು ಪರಾಭವಗೊಳಿಸಿದರು. ಎರಡನೇ ಪಂದ್ಯ ಅಂದರೆ 10ನೇ ಸುತ್ತಿನಲ್ಲಿ ಪೋಲೆಂಡ್‌ನ ಜಾನ್ ಕ್ರಿಸ್ಟಾಫ್ ಡುಡಾ ಎದುರು ಸೋಲನುಭವಿಸಿದರು. ಬಳಿಕ 11ನೇ ಸುತ್ತಿನಲ್ಲಿ ಇಸ್ರೇಲ್ ಆಟಗಾರ ಬೋರಿಸ್ ಗೆಲ್‌ಫಾಂಡ್ ಅವರೊಂದಿಗೆ ಡ್ರಾ ಸಾಧಿಸಿದರೆ, ದಿನದ ಕೊನೆಯ ಸುತ್ತಿನಲ್ಲಿ ಅರ್ಜುನ್ ಅವರಿಗೆ, ಅಮೆರಿಕದ ಕ್ರಿಸ್ಟೊಫರ್ ಯೊ ಎದುರು ಜಯ ಒಲಿಯಿತು.
ಟೂರ್ನಿಯ ಎರಡನೇ ದಿನ ಮೂರು ಸುತ್ತುಗಳಲ್ಲಿ ಗೆಲುವು ಕಂಡಿದ್ದ ಪ್ರಗ್ನಾನಂದ, ಬುಧವಾರ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಮಾತ್ರ ಯಶಸ್ವಿಯಾದರು. ಭಾರತದ ಬಿ.ಅಧಿಬನ್, ಲಿಯೆಮ್ ಲಿ, ಡೇವಿಡ್ ನವಾರ (ಜೆಕ್ ಗಣರಾಜ್ಯ) ಮತ್ತು ಅಮೆರಿಕದ ಹಾನ್ಸ್ ನೀಮನ್ ಅವರೊಂಗಿದಿನ ಪಂದ್ಯಗಳಲ್ಲಿ ಪಾಯಿಂಟ್ಸ್ ಹಂಚಿಕೊಂಡರು.
ಕಾರ್ಲ್‌ಸನ್ ಅವರು ಆಡಿದ ನಾಲ್ಕರ ಪೈಕಿ ಮೂರು ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದರು. ಅಧಿಬನ್ ಅವರು ಕ್ರೊವೇಷ್ಯಾದ ಇವಾನ್ ಸಾರಿಚ್ ಎದುರು ಗೆದ್ದು ಟೂರ್ನಿಯಲ್ಲಿ ಮೊದಲ ಜಯ ಸಂಪಾದಿಸಿದರೂ ಸದ್ಯ ಅವರು 15ನೇ ಸ್ಥಾನದಲ್ಲಿದ್ದಾರೆ.
ಪ್ರಿಲಿಮನರಿ ಹಂತದಲ್ಲಿ ಇನ್ನೂ ಮೂರು ಸುತ್ತುಗಳ ಆಟ ಬಾಕಿಯಿದೆ. ಅದಾದ ಬಳಿಕ ಅಗ್ರ ಎಂಟು ಸ್ಥಾನ ಪಡೆಯುವ ಆಟಗಾರರು ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.