
ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್ ಮತ್ತು ಚಿರಂತ್ ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
20 ವರ್ಷದೊಳಗಿನ ಮಹಿಳೆಯರ 800 ಮೀಟರ್ ಓಟದ ಫೈನಲ್‌ನಲ್ಲಿ ವೈಷ್ಣವಿ 2 ನಿಮಿಷ 07.84 ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಆದರು. 19 ವರ್ಷದ ರಾವಲ್ ಅವರಿಗೆ ಇದು ಎರಡನೇ ಸ್ವರ್ಣ ಪದಕವಾಗಿದೆ. 1500 ಮೀಟರ್ ಓಟದಲ್ಲೂ ಪ್ರಶಸ್ತಿ ಗೆದ್ದಿದ್ದರು.
18 ವರ್ಷದೊಳಗಿನ ಪುರುಷರ 200 ಮೀಟರ್ ಓಟದ ಫೈನಲ್‌ನಲ್ಲಿ ಚಿರಂತ್ 21.81 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು. 17 ವರ್ಷದ ಚಿರಂತ್ ಅವರಿಗೆ ಇದು ಎರಡನೇ ಪದಕ. ಅವರು 100 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
20 ವರ್ಷದೊಳಗಿನವರ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ರಾಜ್ಯದ ಅಪೂರ್ವಾ ನಾಯಕ್ (1 ನಿ.02.56 ಸೆ) ಬೆಳ್ಳಿ ಪದಕ ಗೆದ್ದರು. ಹರಿಯಾಣದ ಮುಸ್ಕಾನ್ (1:01.75) ಚಿನ್ನದ ಪದಕ ಗೆದ್ದರು.
20 ವರ್ಷದೊಳಗಿನವರ ಪುರುಷರ 400 ಮೀಟರ್ ಹರ್ಡಲ್ಸ್‌ನಲ್ಲಿ ಕರ್ನಾಟಕದ ಭೂಷಣ್ ಪಾಟೀಲ(52.07ಸೆ) ಕಂಚಿನ ಪದಕ ಗೆದ್ದರು. ತಮಿಳುನಾಡಿನ ವಿಷ್ಣು (51.74), ಗುರುದೀಪ್ ಎಸ್. (52.02) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.