ADVERTISEMENT

ಎಫ್‌ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌: ಭಾರತಕ್ಕೆ ಸುಲಭ ತುತ್ತಾದ ಐರ್ಲೆಂಡ್‌

ಪಿಟಿಐ
Published 5 ಡಿಸೆಂಬರ್ 2025, 18:44 IST
Last Updated 5 ಡಿಸೆಂಬರ್ 2025, 18:44 IST
ಪೂರ್ಣಿಮಾ ಯಾದವ್‌
ಪೂರ್ಣಿಮಾ ಯಾದವ್‌   

ಸ್ಯಾಂಟಿಯಾಗೊ (ಚಿಲಿ): ಪೂರ್ಣಿಮಾ ಯಾದವ್ ಅವರ ಅಮೋಘ ಆಟದ ನೆರವಿನಿಂದ ಭಾರತ ಹಾಕಿ ತಂಡವು ಶುಕ್ರವಾರ ನಡೆದ ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ನ ಸಿ ಗುಂಪಿನ ಪಂದ್ಯದಲ್ಲಿ 4–0 ಗೋಲುಗಳಿಂದ ಐರ್ಲೆಂಡ್‌ ವಿರುದ್ಧ ಸುಲಭ ಜಯ ಸಾಧಿಸಿತು.

ಭಾರತದ ಪರ ಪೂರ್ಣಿಮಾ (42ನೇ ಮತ್ತು 58ನೇ ನಿಮಿಷ) ಎರಡು ಗೋಲು ಗಳಿಸಿದರೆ, ಕನಿಕಾ ಸಿವಾಚ್‌ (12ನೇ) ಮತ್ತು ಸಾಕ್ಷಿ ರಾಣಾ (57ನೇ) ತಲಾ ಒಂದು ಗೋಲು ಗಳಿಸಿದರು. 

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತದ ತಂಡವು ಮೊದಲ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಪಡೆಯಿತು. ಆದರೆ, ಗೋಲು ಅವಕಾಶವನ್ನು ಕೈಚೆಲ್ಲಿಕೊಂಡಿತು. 10ನೇ ನಿಮಿಷದಲ್ಲಿ ಎರಡನೇ ಪೆನಾಲ್ಟಿ ಕಾರ್ನರ್‌ ಗೆದ್ದರೂ ಚೆಂಡನ್ನು ಗುರಿ ಸೇರಿಸುವಲ್ಲಿ ಭಾರತದ ವನಿತೆಯರು ಎಡವಿದರು. ಅದಾದ ಎರಡು ನಿಮಿಷಗಳಲ್ಲಿ ಸಾಕ್ಷಿ ನೀಡಿದ ಪರಿಪೂರ್ಣ ಪಾಸ್‌ನಲ್ಲಿ ಕನಿಕಾ ಗೋಲು ದಾಖಲಿಸಿ, ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ADVERTISEMENT

ಭಾರತ ತಂಡವು 17ನೇ ಮತ್ತು 23ನೇ ನಿಮಿಷಗಳಲ್ಲಿ ಮತ್ತೆರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದು, ಉತ್ತಮ ಲಯ ಪ್ರದರ್ಶಿಸಿತು. ಆದರೆ, ಐರ್ಲೆಂಡ್‌ನ ಗೋಲ್‌ಕೀಪರ್ ಲೂಸಿ ಮೆಕ್‌ಗೋಲ್ಡ್ರಿಕ್ ಅವರು ತಡೆಗೋಡೆಯಂತೆ ನಿಂತು, ಭಾರತದ ಗೋಲು ಅವಕಾಶಗಳನ್ನು ತಡೆದರು. 24ನೇ ನಿಮಿಷದಲ್ಲಿ ಐರ್ಲೆಂಡ್ ತಂಡವು ಗೋಲು ಗಳಿಸುವ ಮೊದಲ ಪ್ರಯತ್ನ ಮಾಡಿತು. ಭಾರತದ ಗೋಲ್‌ಕೀಪರ್ ಅದನ್ನು ವಿಫಲಗೊಳಿಸಿದರು.

ಎರಡನೇ ಕ್ವಾರ್ಟರ್‌ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿ ಇರುವಂತೆ ಭಾರತ ತಂಡವು ತನ್ನ ಐದನೇ ಪೆನಾಲ್ಟಿ ಕಾರ್ನರ್ ಪಡೆಯಿತಾದರೂ, ಆ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಮತ್ತೆ ಎಡವಿತು. ಹೀಗಾಗಿ, ಮೊದಲಾರ್ಧವನ್ನು ಒಂದು ಗೋಲಿನ ಮುನ್ನಡೆಯೊಂದಿಗೆ ಕೊನೆಗೊಳಿಸಿತು.

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಟಗಾರ್ತಿಯರು ಚೆಂಡನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಂಡರು. ಎದುರಾಳಿ ತಂಡವು ರಕ್ಷಣಾತ್ಮಕ ಆಟ ಪ್ರದರ್ಶಿಸಿತು. 40ನೇ ನಿಮಿಷದಲ್ಲಿ ಭಾರತದ ಮನೀಷಾ ನೀಡಿದ ಪಾಸ್‌ನಲ್ಲಿ ಸುಖ್‌ವೀರ್ ಕೌರ್‌ ಗೋಲು ಗಳಿಸುವ ಯತ್ನ ನಡೆಸಿದರು. ಆದರೆ, ಚೆಂಡು ಗೋಲು ಪೆಟ್ಟಿಗೆಯ ಮೇಲಕ್ಕೆ ಚಿಮ್ಮಿತು. 42ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್‌ ಗೆದ್ದ ಭಾರತ ತಂಡಕ್ಕೆ ಪೂರ್ಣಿಮಾ ಅವರ ಮೂಲಕ ಗೋಲು ಲಭಿಸಿತು. ಸಾಕ್ಷಿ ಶುಕ್ಲಾ ನೀಡಿದ ಪಾಸ್‌ನಲ್ಲಿ ಅವರು ಚೆಂಡನ್ನು ಯಶಸ್ವಿಯಾಗಿ ಗುರಿ ಸೇರಿಸಿದರು. 

ನಾಲ್ಕನೇ ಕ್ವಾರ್ಟರ್‌ನಲ್ಲಿ ಐರ್ಲೆಂಡ್ ತಂಡವು ಪ್ರತಿದಾಳಿಯ ಪ್ರಯತ್ನ ನಡೆಸಿತು. ಆದರೆ, ಭಾರತದ ರಕ್ಷಣಾ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. 57ನೇ ಮತ್ತು 58ನೇ ನಿಮಿಷಗಳಲ್ಲಿ ಕ್ರಮವಾಗಿ ಸಾಕ್ಷಿ ಮತ್ತು ಪೂರ್ಣಿಮಾ ಸತತ ಎರಡು ಗೋಲುಗಳನ್ನು ಗಳಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.

ನಮೀಬಿಯಾ ಎದುರು 13–0ಯಿಂದ ಗೆದ್ದು ಅಭಿಯಾನ ಆರಂಭಿಸಿದ್ದ ಭಾರತ ವನಿತೆಯರು, ತನ್ನ ಎರಡನೇ ಪಂದ್ಯದಲ್ಲಿ 1–3ರಿಂದ ಜರ್ಮನಿ ವಿರುದ್ಧ ಸೋತಿದ್ದರು. ಆರು ಅಂಕ ಗಳಿಸಿರುವ ಭಾರತ ತಂಡವು ಸಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಮೂರೂ ಪಂದ್ಯಗಳನ್ನು ಗೆದ್ದ ಜರ್ಮನಿ (9 ಅಂಕ) ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದಿದೆ.

ಆರು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಆರು ತಂಡಗಳು ಮತ್ತು ಎರಡನೇ ಸ್ಥಾನ ಪಡೆದ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎರಡು ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶಿಸಲಿವೆ. ಹೀಗಾಗಿ, ಭಾರತ ತಂಡದ ನೌಕೌಟ್‌ ಭವಿಷ್ಯ ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.