
ಚೆನ್ನೈ: ಒಂಬತ್ತು ವರ್ಷಗಳ ಬಳಿಕ ತವರಿನಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವು ಪ್ರಶಸ್ತಿಯನ್ನು ಮರಳಿ ಪಡೆಯುವ ತವಕದಲ್ಲಿದೆ. ಆತಿಥೇಯರು ಶುಕ್ರವಾರ ಆರಂಭವಾಗುವ ಈ ಟೂರ್ನಿಯಲ್ಲಿ ಚಿಲಿ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಭಾರತ ತಂಡವು ‘ಬಿ’ ಗುಂಪಿನಿಂದ ನಾಕೌಟ್‌ಗೆ ಮುನ್ನಡೆಯುವ ನೆಚ್ಚಿನ ತಂಡ ಎನಿಸಿದೆ. ಭಾರತ ಮತ್ತು ಚಿಲಿ ಜೊತೆಗೆ ಒಮಾನ್ ಮತ್ತು ಸ್ವಿಜರ್ಲೆಂಡ್ ತಂಡಗಳೂ ಇದೇ ಗುಂಪಿನಲ್ಲಿವೆ. ಸಿಂಧೂರ್ ಕಾರ್ಯಾಚರಣೆಯ ನಂತರ ಭದ್ರತೆಯ ಆತಂಕ ವ್ಯಕ್ತಪಡಿಸಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹಿಂದೆಸರಿದ ಪರಿಣಾಮ ಒಮಾನ್‌ಗೆ ಅವಕಾಶ ದೊರಕಿದೆ.
1979ರಲ್ಲಿ ಜೂನಿಯರ್ ವಿಶ್ವಕಪ್ ಆರಂಭವಾಗಿದ್ದು, ಭಾರತ ತಂಡ 2001ರಲ್ಲಿ ನ್ಯೂಜಿಲೆಂಡ್‌ನ ಹೋಬಾರ್ಟ್‌ನಲ್ಲಿ ಮತ್ತು 2016ರಲ್ಲಿ ಲಖನೌದಲ್ಲಿ ಚಾಂಪಿಯನ್ ಆಗಿದೆ. ಜರ್ಮನಿ ತಂಡ ಏಳು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಅತಿ ಯಶಸ್ವಿ ತಂಡವೆನಿಸಿದೆ. ಭಾರತದಂತೆ ಅರ್ಜೆಂಟೀನಾ ಸಹ ಎರಡು ಬಾರಿ (2005 ಮತ್ತು 2021) ಕಿರೀಟ ಧರಿಸಿದೆ.
ಫ್ರಾನ್ಸ್‌ನ ವರ್ಸೇಲ್ಸ್‌ನಲ್ಲಿ ನಡೆದ 1979ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದಿತ್ತು. 1997ರಲ್ಲಿ ಇಂಗ್ಲೆಂಡ್‌ನ ಮಿಲ್ಟನ್ ಕೀನ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
ಕ್ವಾಲಾಲಂಪುರದಲ್ಲಿ ನಡೆದ ಈ ಹಿಂದಿನ (2023) ಆವೃತ್ತಿಯಲ್ಲಿ ಭಾರತ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ 1–3 ರಿಂದ ಸ್ಪೇನ್‌ಗೆ ಸೋತು ನಾಲ್ಕನೇ ಸ್ಥಾನಕ್ಕೆ ಸರಿದಿತ್ತು. ಜರ್ಮನಿ ಚಾಂಪಿಯನ್ ಆಗಿತ್ತು.
ಚೆನ್ನೈ ಮತ್ತು ಮದುರೈನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿ 24 ತಂಡಗಳು ಭಾಗವಹಿಸುತ್ತಿವೆ. ತಂಡಗಳನ್ನು ಆರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಆರು ತಂಡಗಳ ಜೊತೆ, ಎರಡನೇ ಸ್ಥಾನ ಪಡೆದ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎರಡು ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶಿಸಲಿವೆ.
21 ವರ್ಷದೊಳಗಿನವರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪಿ.ಆರ್.ಶ್ರೀಜೇಶ್ ಗರಡಿಯಲ್ಲಿರುವ ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಜರ್ಮನಿ ಅಗ್ರಸ್ಥಾನದಲ್ಲಿದೆ. ಚಿಲಿ ವಿಶ್ವಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿದ್ದು, ಭಾರತಕ್ಕೆ ಹೆಚ್ಚಿನ ಸಮಸ್ಯೆ ತಂದೊಡ್ಡದು ಎಂಬ ನಿರೀಕ್ಷೆಯಿದೆ.
ಪೆನಾಲ್ಟಿ ಕಾರ್ನರ್‌ಗಳ ಪರಿವರ್ತನೆ ವಿಷಯದಲ್ಲಿ ಭಾರತ ತಂಡ ಸುಧಾರಣೆ ಕಾಣಬೇಕಾಗಿದೆ. ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲಿ ಈ ದೌರ್ಬಲ್ಯ ಎದ್ದುಕಂಡಿತ್ತು. ಆ ಟೂರ್ನಿಯಲ್ಲಿ ದಕ್ಕಿದ 53 ಪೆನಾಲ್ಟಿ ಕಾರ್ನರ್‌ಗಳಲ್ಲಿ ಎಂಟು ಮಾತ್ರ ಗೋಲಾಗಿದ್ದವು.
ಶ್ರೀಜೇಶ್ ಅವರಿಗೆ ಇದು ಗೊತ್ತಿಲ್ಲದ ವಿಷಯವೇನಲ್ಲ. ‘ಈ ವಿಷಯದಲ್ಲಿ ಕಳವಳವಿದೆ. ಇದರ ಬಗ್ಗೆ ಗಮನಹರಿಸಿದ್ದೇವೆ. ನಮ್ಮಲ್ಲಿ ಉತ್ತಮ ಡ್ರ್ಯಾಗ್‌ಫ್ಲಿಕರ್‌ಗಳಿದ್ದಾರೆ. ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದೇವೆ’ ಎಂದಿದ್ದಾರೆ ಭಾರತ ತಂಡದ ಮಾಜಿ ಗೋಲ್‌ಕೀಪರ್. ರೋಹಿತ್ ತಂಡದ ನಾಯಕರಾಗಿದ್ದಾರೆ.
ಶುಕ್ರವಾರ ನಡೆಯುವ ಇತರ ಪಂದ್ಯಗಳಲ್ಲಿ ಜರ್ಮನಿ, ದಕ್ಷಿಣ ಆಫ್ರಿಕಾ ವಿರುದ್ಧ (ಮದುರೈ), ಕೆನಡಾ, ಐರ್ಲೆಂಡ್ ವಿರುದ್ಧ (ಮದುರೈ), ಅರ್ಜೆಂಟೀನಾ, ಜಪಾನ್ ವಿರುದ್ಧ (ಚೆನ್ನೈ), ಸ್ಪೇನ್, ಈಜಿಪ್ಟ್ ವಿರುದ್ಧ (ಮದುರೈ), ನ್ಯೂಜಿಲೆಂಡ್, ಚೀನಾ ವಿರುದ್ಧ (ಚೆನ್ನೈ), ಬೆಲ್ಜಿಯಂ, ನಮೀಬಿಯಾ ವಿರುದ್ಧ (ಮದುರೈ) ಮತ್ತು ಒಮಾನ್, ಸ್ವಿಜರ್ಲೆಂಡ್ (ಚೆನ್ನೈ) ವಿರುದ್ಧ ಆಡಲಿದೆ.