ಬೆಂಗಳೂರು: ಕರ್ನಾಟಕದ ಈಜುಪಟುಗಳು ಅಹಮದಾಬಾದ್‌ನಲ್ಲಿ ಗುರುವಾರ ಮುಕ್ತಾಯಗೊಂಡ 51ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 86 ಪದಕಗಳನ್ನು ಗೆದ್ದು, ಸಮಗ್ರ ಪ್ರಶಸ್ತಿಯೊಂದಿಗೆ ಅಭಿಯಾನ ಮುಗಿಸಿದರು.
37 ಚಿನ್ನ, 26 ಬೆಳ್ಳಿ ಮತ್ತು 23 ಕಂಚಿನ ಪದಕಗಳೊಂದಿಗೆ ಕರ್ನಾಟಕ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಮಹಾರಾಷ್ಟ್ರ 38 (17 ಚಿನ್ನ, 10 ಬೆಳ್ಳಿ ಮತ್ತು 11 ಕಂಚು), ಬಂಗಾಳ 11 (6 ಚಿನ್ನ, 4 ಬೆಳ್ಳಿ ಮತ್ತು 1 ಕಂಚು) ಕ್ರಮವಾಗಿ ನಂತರದ ಸ್ಥಾನ ಪಡೆಯಿತು.
ಬಾಲಕರ ಗುಂಪು 1 ವಿಭಾಗದಲ್ಲಿ 161 ಅಂಕ, ಗುಂಪು 2ರಲ್ಲಿ 183 ಅಂಕಗಳೊಂದಿಗೆ ಕರ್ನಾಟಕ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಲಕಿಯರ ಗುಂಪು 1ರಲ್ಲಿ ಕರ್ನಾಟಕ (206) ಮತ್ತು ಗುಂಪು 2ರಲ್ಲಿ ಮಹಾರಾಷ್ಟ್ರ (138) ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡವು.
ಕರ್ನಾಟಕದ ಉದಯೋನ್ಮುಖ ತಾರೆ ದಕ್ಷಣ್ ಎಸ್. (ಗುಂಪು 1) ಅವರು ಎರಡು ಕೂಟ ದಾಖಲೆಯೊಂದಿಗೆ ನಾಲ್ಕು ಚಿನ್ನ, ಒಂದು ಕಂಚು ಗೆದ್ದು ಬಾಲಕರಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾದರು. ರಾಜ್ಯದ ತನಿಷಿ ಗುಪ್ತಾ (ಗುಂಪು 1) ಮೂರು ಕೂಟ ದಾಖಲೆಯೊಂದಿಗೆ ಐದು ಚಿನ್ನ ಗೆದ್ದು, ಬಾಲಕಿಯರ ವೈಯಕ್ತಿಕ ಪ್ರಶಸ್ತಿ ಗೆದ್ದರು.
ಮಣಿಪುರದ ಲೈಟೊಂಜಮ್ ಲ್ಯಾಂಚೆನ್ಬಾ (5 ಚಿನ್ನ) ಬಾಲಕರ ಗುಂಪು 2ರಲ್ಲಿ, ಮಹಾರಾಷ್ಟ್ರದ ಸಾನ್ವಿ ದೇಶ್‌ವಾಲ್ (5 ಚಿನ್ನ) ಬಾಲಕಿಯರ ಗುಂಪು 2ರಲ್ಲಿ ವೈಯಕ್ತಿಕ ಚಾಂಪಿಯನ್ ಆದರು.
ತನಿಶಿ, ರುಜುಲಾ ರಾಷ್ಟ್ರೀಯ ದಾಖಲೆ: ಕೂಟದ ಕೊನೆಯ ದಿನ ಕರ್ನಾಟಕದ ತನಿಷಿ ಗುಪ್ತ ಅವರು ಬಾಲಕಿಯರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2 ನಿಮಿಷ 20.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಅವರು ಕರ್ನಾಟಕದ ದಮಣಿ ಗೌಡ ಅವರು (2:21.53) 2015ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುಳುಗಿಸಿದರು.
ರಾಜ್ಯದ ರುಜುಲಾ ಎಸ್. ಅವರು ಬಾಲಕಿಯರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ 58.54 ಸೆಕೆಂಡ್ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಬರೆದರು. ಅವರು 2014ರಲ್ಲಿ ಶಿವಾನಿ ಕಟಾರಿಯಾ (58.71ಸೆ) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಮಣಿಪುರದ ಲೈಟೊಂಜಮ್ ಅವರು ಬಾಲಕರ 50 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 26.03 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಅವರು 2018ರಲ್ಲಿ ಆರ್ಯನ್ ವರ್ಣೇಕರ್ (26.13) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಫಲಿತಾಂಶ (ಕರ್ನಾಟಕದವರು ಮಾತ್ರ): ಬಾಲಕರು: ಗುಂಪು 1: 50 ಮೀ ಬಟರ್‌ಫ್ಲೈ: ಹರಿಕಾರ್ತಿಕ್ ವೇಲು (25.97ಸೆ)–3.
100 ಮೀ ಬ್ರೆಸ್ಟ್ ಸ್ಟ್ರೋಕ್: ಆಯುಷ್ ಶಿವರಾಜು ಮಾಗನಹಳ್ಳಿ (1ನಿ.07.07ಸೆ)–3.
100 ಮೀ ಫ್ರೀಸ್ಟೈಲ್: ದಕ್ಷಣ್ ಎಸ್. (52.68ಸೆ)– 1; ಮೋನಿಶ್ ಪಿ.ವಿ. (53.06ಸೆ)–3.
ಗುಂಪು 2: 100 ಮೀ ಫ್ರೀಸ್ಟೈಲ್: ಶರಣ್ ಎಸ್. (55.50ಸೆ)–1.
100 ಮೀ ಬ್ರೆಸ್ಟ್ ಸ್ಟ್ರೋಕ್: ರೆಯಾನ್ಶ್ ಕಂಠಿ ವೈ. (1ನಿ.12.01ಸೆ)–2.
ಬಾಲಕಿಯರು: ಗುಂಪು 1: 50 ಮೀ ಬ್ರೆಸ್ಟ್‌ಸ್ಟ್ರೋಕ್: ಮಾನವಿ ವರ್ಮಾ (35.09 ಸೆ)–2; ಹಿಯಾ ಎಂ. (35.94ಸೆ)– 3.
100 ಮೀ ಫ್ರೀಸ್ಟೈಲ್: ರುಜುಲಾ ಎಸ್. (ನೂತನ ದಾಖಲೆ: 58.54ಸೆ; ಹಳೆಯದು: 58.71ಸೆ, ಶಿವಾನಿ ಕಟಾರಿಯಾ)–1.
200 ಮೀ ಬಟರ್‌ಫ್ಲೈ: ತನಿಷಿ ಗುಪ್ತಾ (ನೂತನ ದಾಖಲೆ: 2ನಿ.20.34ಸೆ, ಹಳೆಯದು: ದಾಮಿನಿ ಗೌಡ, 2:21.53) 1; ಹಶಿಕಾ ರಾಮಚಂದ್ರ (2:22.47)–2.
ಗುಂಪು 2: 50 ಮೀ ಬ್ರೆಸ್ಟ್‌ಸ್ಟ್ರೋಕ್: ಇಂಚರ ಎಚ್.ಆರ್ (35.95ಸೆ)–3.
100 ಮೀ ಫ್ರೀಸ್ಟೈಲ್: ತ್ರಿಶಾ ಸಿಂಧು ಎಸ್. (1:00.87)–1.
ಸಮಗ್ರ ಪ್ರಶಸ್ತಿ: ಕರ್ನಾಟಕ (645 ಅಂಕ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.