50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಅನ್ಶಿಕಾ (ಬೆಳ್ಳಿ), ಅನುಷ್ಕಾ ತೋಕೂರ್ (ಚಿನ್ನ) ಮತ್ತು ಆಧ್ಯಾ ಅಗರವಾಲ್ (ಕಂಚು).
ನವದೆಹಲಿ: ಭಾರತ ತಂಡವು, ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಮಾಡಿತು. ಮೊದಲ ದಿನವಾದ ಗುರುವಾರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಮಹಿಳಾ ತಂಡ ಮೂರೂ ಪದಕ ಗೆದ್ದು ಕ್ಲೀನ್ ಸ್ವೀಪ್ ಮಾಡಿದರೆ, ಪುರುಷರ ತಂಡ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು.
ಅನುಷ್ಕಾ ತೋಕೂರ್ ಅವರು ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 621.6 ಸ್ಕೋರ್‌ನೊಡನೆ ಚಿನ್ನ ಗೆದ್ದರು. 18 ವರ್ಷ ವಯಸ್ಸಿನ ಅನ್ಶಿಕಾ (619.2) ಬೆಳ್ಳಿ ಗೆದ್ದರೆ, 20 ವರ್ಷ ವಯಸ್ಸಿನ ಆಧ್ಯಾ ಅಗರವಾಲ್ (615.9) ಕಂಚಿನ ಪದಕ ಗೆದ್ದರು. ಕಜಕಸ್ತಾನದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅನುಷ್ಕಾ ಅವರು 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿ ಆಗಿದ್ದರು.
ದೀಪೇಂದ್ರ ಸಿಂಗ್ ಶೆಖಾವತ್ ಮತ್ತು ರೋಹಿತ್ ಕನ್ಯಾನ ಅವರು ಪುರುಷರ ವಿಭಾಗದ 50 ಮೀ. ರೈಪಲ್ ಪ್ರೋನ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ತಟಸ್ಥ ಅಥ್ಲೀಟ್ಸ್ ತಂಡದ ಕಮಿಲ್ ನುರಿಯಾಕ್‌ಮೆಟೋವ್ (618.9) ಚಿನ್ನ ಗೆದ್ದರು. ದೀಪೇಂದ್ರ 617.9 ಮತ್ತು ರೋಹಿತ್ 616.3 ಸ್ಕೋರ್ ಮಾಡಿದರು.
ಒಲಿಂಪಿಕ್ ಸ್ಪರ್ಧೆಯಾದ ಪುರುಷರ ಮತ್ತು ಮಹಿಳೆಯರ ವಿಭಾಗದ 10 ಮೀ. ಏರ್ ಪಿಸ್ತೂಲ್ ಹಣಾಹಣಿ ಶುಕ್ರವಾರ ನಡೆಯುಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.