ADVERTISEMENT

ಏಷ್ಯನ್ ಅಥ್ಲೆಟಿಕ್ಸ್‌ ಕೂಟ | ಜ್ಯೋತಿ, ತಜಿಂದರ್ ರಾಷ್ಟ್ರೀಯ ದಾಖಲೆ

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್‌ ಕೂಟ

ಪಿಟಿಐ
Published 17 ಫೆಬ್ರುವರಿ 2024, 12:46 IST
Last Updated 17 ಫೆಬ್ರುವರಿ 2024, 12:46 IST
ಜ್ಯೋತಿ ಯರ‍್ರಾಜಿ
ಜ್ಯೋತಿ ಯರ‍್ರಾಜಿ   

ಟೆಹರಾನ್: ಭಾರತದ ಅನುಭವಿ ಶಾಟ್‌ಪಟ್‌ ಸ್ಪರ್ಧಿ ತಜಿಂದರ್‌ಪಾಲ್‌ ಸಿಂಗ್ ತೂರ್‌ ಮತ್ತು ಭರವಸೆಯ ಓಟಗಾರ್ತಿ ಜ್ಯೋತಿ ಯರ‍್ರಾಜಿ ಅವರು ಶನಿವಾರ ಆರಂಭವಾದ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಡನೆ ಚಿನ್ನ ಗೆದ್ದುಕೊಂಡರು. ಹರ್ಮಿಲನ್ ಬೇನ್ಸ್‌ ಅವರೂ (1,500 ಮೀ. ಓಟ) ಚಿನ್ನ ಗೆದ್ದರು.

24 ವರ್ಷದ ಜ್ಯೋತಿ ಮಹಿಳೆಯರ 60 ಮೀಟರ್ ಹರ್ಡಲ್ಸ್ ಓಟವನ್ನು 8.12 ಸೆಕೆಂಡುಗಳಲ್ಲಿ ಪೂರೈಸಿ, ತಮ್ಮದೇ ಹಳೆಯ ದಾಖಲೆಯನ್ನು (8.13 ಸೆ.) ಸುಧಾರಿಸಿದರು. ಕಳೆದ ವರ್ಷ ಇದೇ ಕೂಟದಲ್ಲಿ ಹಿಂದಿನ ದಾಖಲೆ ಸ್ಥಾಪಿಸಿದ್ದರು. ಆದರೆ ಕಳೆದ ಸಲದ ಸಾಧನೆಗೆ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಜ್ಯೋತಿ 2022ರ ಏಷ್ಯನ್ ಗೇಮ್ಸ್‌ನಲ್ಲಿ 100 ಮೀ. ಹರ್ಡಲ್ಸ್ ಓಟದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು.

ಜಪಾನ್‌ನ ಅಸುಕಾ ತೆರೆಡಾ (8.21 ಸೆ.) ಎರಡನೇ ಸ್ಥಾನಕ್ಕೆ ಪಡೆದರೆ, ಹಾಂಗ್‌ಕಾಂಗ್‌ನ ಲಿಯಿ ಲೈ ಯಿಯು (8.26 ಸೆ.) ಕಂಚಿನ ಪದಕ ಪಡೆದರು.

ADVERTISEMENT

ಎರಡು ಬಾರಿಯ ಏಷ್ಯನ್ ಗೇಮ್ಸ್ ಶಾಟ್‌ಪಟ್‌ ಸ್ವರ್ಣ ವಿಜೇತ ತಜಿಂದರ್ ಪಾಲ್ ತೂರ್ ತಮ್ಮ ಎರಡನೇ ಪ್ರಯತ್ನದಲ್ಲಿ 19.72 ಮೀ. ದೂರ ಎಸೆದು ನೂತನ ರಾಷ್ಟ್ರೀಯ ಒಳಾಂಗಣ ದಾಖಲೆ ಸ್ಥಾಪಿಸಿದರು. ಕಜಕಸ್ತಾನದ ಇವಾನೊವ್ ಇವಾನ್ (19.08 ಮೀ) ಬೆಳ್ಳಿ ಮತ್ತು ಇರಾನ್‌ನ ಮೆಹ್ದಿ ಸಬೆರಿ (18.74 ಮೀ) ಕಂಚಿನ ಪದಕ ಪಡೆದರು.

ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ಹರ್ಮಿಲನ್ ಮಹಿಳೆಯರ 1,500 ಮೀ. ಓಟದಲ್ಲಿ (4ನಿ.29.55 ಸೆ.) ಅಗ್ರಸ್ಥಾನ ಪಡೆದು ಭಾರತಕ್ಕೆ ದಿನದ ಮೊದಲ ಚಿನ್ನ ಗಳಿಸಿಕೊಟ್ಟರು. ಸಮೀಪದ ಸ್ಪರ್ಧಿಯಾಗಿದ್ದ ಕಿರ್ಗಿಸ್ತಾನದ ಕಲಿಲ್ ಕಿಝಿ ಐನುಸ್ಕಾ (4ನಿ.35.29ಸೆ.) ಎರಡನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.