ADVERTISEMENT

ಕ್ರೀಡಾಕೂಟಕ್ಕೆ ಅಂಗಣದ ‘ಹುಡುಕಾಟ’

ನವೆಂಬರ್‌ನಿಂದ ಜೂನಿಯರ್ ವಿಭಾಗದ ಕೂಟಗಳ ಆಯೋಜನೆಗೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ ಸಿದ್ಧ

ವಿಕ್ರಂ ಕಾಂತಿಕೆರೆ
Published 17 ಸೆಪ್ಟೆಂಬರ್ 2020, 20:24 IST
Last Updated 17 ಸೆಪ್ಟೆಂಬರ್ 2020, 20:24 IST
ಜೂನಿಯರ್ ಅಥ್ಲೆಟಿಕ್ಸ್ ಕೂಟವೊಂದರ ನೋಟ –ಪ್ರಜಾವಾಣಿ ಚಿತ್ರ
ಜೂನಿಯರ್ ಅಥ್ಲೆಟಿಕ್ಸ್ ಕೂಟವೊಂದರ ನೋಟ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಕೊನೆಗೂ ಈ ವರ್ಷದ ಟ್ರ್ಯಾಕ್ ಮತ್ತು ಫೀಲ್ಡ್ ಚಟುವಟಿಕೆ ಆರಂಭಿಸಲು ಮುಂದಾಗಿದೆ. ಆದರೆ ರಾಷ್ಟ್ರೀಯ ಕೂಟಗಳಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯನ್ನು (ಕೆಎಎ) ಇಕ್ಕಟ್ಟಿಗೆ ಸಿಲುಕಿಸಿದೆ.

‌ಈ ವರ್ಷ ಸೀನಿಯರ್ ವಿಭಾಗದ ಯಾವುದೇ ಸ್ಪರ್ಧೆ ನಡೆಸಲು ನಿರ್ಧರಿಸಿರುವ ಎಎಫ್‌ಐ ಜೂನಿಯರ್ ವಿಭಾಗದ ಕೂಟಗಳಿಗೆ ನವೆಂಬರ್ 21ರಂದು ಚಾಲನೆ ನೀಡಲಿದೆ. ಮುಂದಿನ ವರ್ಷದ ಫೆಬ್ರುವರಿಯಲ್ಲಿ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ನಡೆಯಲಿದೆ. ಇದರ ಪೂರ್ವಭಾವಿಯಾಗಿ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ ನವೆಂಬರ್ ಕೊನೆಯಲ್ಲಿ ನಡೆಯಲಿದೆ. ಇದಕ್ಕೆ ರಾಜ್ಯದಿಂದ ಸ್ಪರ್ಧಿಗಳನ್ನು ಕಳುಹಿಸಬೇಕಾದರೆ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಬೇಕು. ಈ ಕೂಟಕ್ಕೆ ಸ್ಥಳ ನಿಗದಿ ಮಾಡುವುದು ಕೆಎಎಗೆ ತಲೆನೋವು ತಂದಿರುವ ವಿಷಯ.

ಜೂನಿಯ‌ರ್ ಚಾಂಪಿಯನ್‌ಷಿಪ್‌ಗಳ ವೇಳಾಪಟ್ಟಿ ಕೈಸೇರಿದ ಕೂಡಲೇ ಕೆಎಎ ಜಿಲ್ಲಾ ಸಂಸ್ಥೆಗಳಿಗೆ ಪತ್ರ ಬರೆದು ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲು ಮುಂದೆ ಬರುವಂತೆ ಕೋರಿಕೊಂಡಿದೆ. ಸೆಪ್ಟೆಂಬರ್ 15ರ ಒಳಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಆದರೆ ಈ ವರೆಗೆ ಯಾವ ಜಿಲ್ಲೆಯೂ ಕ್ರೀಡಾಕೂಟ ಆಯೋಜನೆಗೆ ಆಸಕ್ತಿ ತೋರಲಿಲ್ಲ. ಕೋವಿಡ್‌–19ರಿಂದ ಉಂಟಾಗಿರುವ ಸಂಕಷ್ಟದಿಂದಾಗಿ ಸದ್ಯ ಕ್ರೀಡಾಕೂಟ ಆಯೋಜಿಸಲು ಸಾಧ್ಯವಿಲ್ಲ ಎಂಬುದು ಜಿಲ್ಲಾ ಸಂಸ್ಥೆಗಳ ಅಭಿಪ್ರಾಯ.

ADVERTISEMENT

ಸಾಮಾನ್ಯವಾಗಿ ರಾಜ್ಯ ಕ್ರೀಡಾಕೂಟಗಳನ್ನು ಆಯೋಜಿಸಲು ಆಸಕ್ತಿ ಇದ್ದರೂ ಅವಕಾಶ ಪಡೆಯಲು ಜಿಲ್ಲಾ ಸಂಸ್ಥೆಗಳು ಕೆಎಎಯ ದುಂಬಾಲು ಬೀಳಬೇಕಾಗುತ್ತದೆ. ಆದರೆ ಈಗ ಕೆಎಎ ತಾನಾಗಿಯೇ ಜಿಲ್ಲಾ ಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್ ನವೀಕರಣ ಕಾರ್ಯ ಇನ್ನೂ ಮುಗಿಯದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಸತತ ಮಳೆ ಸುರಿಯುತ್ತಿರುವುದರಿಂದ ಟ್ರ್ಯಾಕ್‌ನ ಕಾಮಗಾರಿ ಸದ್ಯ ಪುನರಾರಂಭಗೊಳ್ಳುವ ಸಾಧ್ಯತೆಗಳು ಇಲ್ಲ.

’ಜೂನಿಯರ್ ಕ್ರೀಡಾಕೂಟದ ಆಯೋಜನೆಗೆ ಕನಿಷ್ಠ ₹ 15 ಲಕ್ಷ ಬೇಕು. ಜಿಲ್ಲಾ ಸಂಸ್ಥೆಗಳುಇಷ್ಟು ಮೊತ್ತವನ್ನು ಭರಿಸುವಷ್ಟು ಬಲಿಷ್ಠವಾಗಿಲ್ಲ. ಆದ್ದರಿಂದ ಪ್ರಾಯೋಜಕರ ಮುಂದೆ ಕೈಚಾಚಬೇಕು. ಕೋವಿಡ್‌ನಿಂದ ಎಲ್ಲ ಕ್ಷೇತ್ರಗಳ ಮೇಲೆಯೂ ದುಷ್ಪರಿಣಾಮ ಉಂಟಾಗಿದ್ದು ಯಾರ ಬಳಿಗೆ ಹೋಗಿ ಹಣ ಕೇಳಲಿ’ ಎಂದು ಜಿಲ್ಲಾ ಸಂಸ್ಥೆಯೊಂದರ ಅಧ್ಯಕ್ಷರು ಪ್ರಶ್ನಿಸಿದರು.

’ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಈಗ ಇಲ್ಲ. ಕೆಎಎ ಮಾಡಿರುವ ಮನವಿಯ ಮೇರೆಗೆ ಸಭೆಯೊಂದನ್ನು ನಡೆಸಬೇಕು ಎಂದು ನಿರ್ಧರಿಸಿದ್ದೇವೆ. ಯಾವುದಾದರೂ ಮೂಲದಿಂದ ಆರ್ಥಿಕ ಬಲ ಸಿಗುವುದಾದರೆ ಕ್ರೀಡಾಕೂಟ ಆಯೋಜನೆಯ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಮತ್ತೊಂದು ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ತಿಳಿಸಿದರು.

ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ?

ಸೀನಿಯರ್ ಕ್ರೀಡಾಕೂಟವನ್ನು ಮುಂದಿನ ವರ್ಷ ಆಯೋಜಿಸಲು ಎಎಫ್‌ಐ ನಿರ್ಧರಿಸಿದೆ. ಇದರ ಆತಿಥ್ಯ ಬೆಂಗಳೂರಿಗೆ ಸಿಗುವ ಸಾಧ್ಯತೆ ಇದೆ. ಈ ವರ್ಷದ ನವೆಂಬರ್‌ ಎರಡರಿಂದ ಆರರ ವರೆಗೆ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಎಎಫ್‌ಐ ವೆಬ್‌ಸೈಟ್‌ನಲ್ಲಿ ಇನ್ನೂ ಈ ದಿನಾಂಕ ಹಾಗೆಯೇ ಉಳಿದುಕೊಂಡಿದೆ. ಆದರೆ ಕೂಟವು ಮುಂದಿನ ವರ್ಷದ ಜೂನ್‌ನಲ್ಲಷ್ಟೇ ನಡೆಯಲಿದ್ದು ಬೆಂಗಳೂರಿಗೆ ಇದರ ಆತಿಥ್ಯದ ಅವಕಾಶ ಸಿಗಲಿದೆ ಎಂದು ಕೆಎಎ ಕಾರ್ಯದರ್ಶಿ ರಾಜವೇಲು ತಿಳಿಸಿದರು. ಜನವರಿಯಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಮುಕ್ತ ಕೂಟವೂ ನಡೆಯಲಿದೆ ಎಂದು ಅವರು ವಿವರಿಸಿದರು.

ನವೆಂಬರ್ ಆರು, ಏಳು ಮತ್ತು ಎಂಟರಂದು ರಾಜ್ಯ ಜೂನಿಯರ್ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದೆ. ಆಯೋಜನೆಗೆ ಆಸಕ್ತಿ ಇರುವವರು ಮುಂದೆ ಬರುವಂತೆ ಕೋರಿ ಸೆಪ್ಟೆಂಬರ್ ಮೊದಲ ವಾರದಲ್ಲೇ ಜಿಲ್ಲಾ ಸಂಸ್ಥೆಗಳಿಗೆ ಪತ್ರ ಕಳುಹಿಸಲಾಗಿದೆ. ಇನ್ನೂ ಯಾರಿಂದಲೂ ಪೂರಕ ಪ್ರತಿಕ್ರಿಯೆ ಬರಲಿಲ್ಲ. ಕೋವಿಡ್‌ನಿಂದ ಉಂಟಾಗಿರುವ ವಿಷಮ ಸ್ಥಿತಿ ಇದಕ್ಕೆ ಕಾರಣ ಆಗಿರಬಹುದು. ಆದ್ದರಿಂದ ಇನ್ನೂ ಕೆಲವು ದಿನ ಕಾಯಲು ನಿರ್ಧರಿಸಲಾಗಿದೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

ರಾಜವೇಲು, ಕೆಎಎ ಕಾರ್ಯದರ್ಶಿ

ಈ ವರ್ಷದ ಜೂನಿಯರ್/ಯೂತ್ ಕೂಟಗಳ ವೇಳಾಪಟ್ಟಿ

ಸ್ಪರ್ಧೆಗಳು

ಪೂರ್ವವಲಯ ಚಾಂಪಿಯನ್‌ಷಿಪ್‌; ನ.21–22; ಭುವನೇಶ್ವರ

ಉತ್ತರ ವಲಯ ಚಾಂಪಿಯನ್‌ಷಿಪ್‌; ನ.21–22; ಮೀರಟ್‌

ದಕ್ಷಿಣ ವಲಯ ಚಾಂಪಿಯನ್‌ಷಿಪ್‌; ನ.28–29;‍ಪುದುಚೇರಿ

ಪಶ್ಚಿಮ ವಲಯಚಾಂಪಿಯನ್‌ಷಿಪ್‌; ನ.28–29;‍ಮಹಾರಾಷ್ಟ್ರ

ಯೂತ್ ಚಾಂಪಿಯನ್‌ಷಿಪ್‌; ಡಿ.11–13;ವಿಜಯವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.