ADVERTISEMENT

ದೇಶ ಪ್ರತಿನಿಧಿಸುವ ಆಸೆಯಲ್ಲಿ ಆರ್ಮುಗಂ

ಐಐಪಿ ಕಬಡ್ಡಿ ಲೀಗ್‌ನ ಚಾಂಪಿಯನ್‌ ಬೆಂಗಳೂರು ರೈನೋಸ್‌ ತಂಡದ ನಾಯಕ

ಬಸವರಾಜ ದಳವಾಯಿ
Published 9 ಜೂನ್ 2019, 19:30 IST
Last Updated 9 ಜೂನ್ 2019, 19:30 IST
ರೇಡಿಂಗ್‌ ನಿರತ ಆರ್ಮುಗಂ
ರೇಡಿಂಗ್‌ ನಿರತ ಆರ್ಮುಗಂ   

ಪ್ರೋ ಕಬಡ್ಡಿ ಲೀಗ್‌ಗೆ ಪರ್ಯಾಯವೆಂಬಂತೆ ಇತ್ತೀಚೆಗೆ ಹುಟ್ಟಿಕೊಂಡಿದ್ದು ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ ಪ್ರೀಮಿಯರ್‌ ಲೀಗ್‌. ಜೂನ್‌ 4ರಂದು ಈ ಲೀಗ್‌ನ ಮೊದಲ ಆವೃತ್ತಿಯ ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ನಡೆಯಿತು. ನ್ಯೂ ಕಬಡ್ಡಿ ಫೆಡರೇಷನ್‌ ಹಾಗೂ ಡಿ ಸ್ಪೋರ್ಟ್ಸ್ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಬೆಂಗಳೂರು ರೈನೋಸ್‌ ತಂಡ ಚಾಂಪಿಯನ್‌ ಪಟ್ಟ ಧರಿಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪುಣೆ ಪ್ರೈಡ್‌ ತಂಡವನ್ನು ಸೋಲಿಸಿ ತವರಿನ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ವೇಳೆ ಬೆಂಗಳೂರು ತಂಡದ ನಾಯಕರಾಗಿದ್ದ ಆರ್ಮುಗಂ ಅವರು ಪ್ರಜಾವಾಣಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ ಲೀಗ್‌ನ ಚೊಚ್ಚಲ ಚಾಂಪಿಯನ್‌ ಆಗಿದ್ದೀರಿ, ಏನನಿಸುತ್ತಿದೆ?
ಮೊದಲ ಯತ್ನದಲ್ಲೇ ನಮ್ಮ ತಂಡ ಪ್ರಶಸ್ತಿ ಎತ್ತಿಹಿಡಿದಿದ್ದು, ತುಂಬಾ ಸಂತೋಷವಾಗುತ್ತಿದೆ. ಬೆಂಗಳೂರಿನ ಪ್ರೇಕ್ಷಕರ ಅಪಾರ ಬೆಂಬಲ ಕೂಡ ಇದಕ್ಕೆ ಕಾರಣವಾಗಿದೆ.

ಕಬಡ್ಡಿ ಕುರಿತು ನೀವು ಆಸಕ್ತಿ ಬೆಳೆಸಿಕೊಂಡಿದ್ದು ಹೇಗೆ?
ನಾನು ಹುಟ್ಟಿದ್ದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಒಂದು ಹಳ್ಳಿಯಲ್ಲಿ. ಬೆಂಗಳೂರಿನಲ್ಲೇ ನನ್ನ ಶಿಕ್ಷಣ ಮುಗಿಸಿದೆ. ಆರಂಭದಲ್ಲಿ ಚಾಮುಂಡೇಶ್ವರಿ ಕಬಡ್ಡಿ ಕ್ಲಬ್‌ಗೆ ಸೇರಿಕೊಂಡು ಆಟದ ಪ್ರಾಥಮಿಕ ನಿಯಮಗಳನ್ನು ಅರಿತುಕೊಂಡೆ. ಆ ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ತಂಡ ಅಭ್ಯಾಸ ನಡೆಸುವುದನ್ನು ಗಮನಿಸಿ ನಾನು ಕಬಡ್ಡಿಗೆ ಸೇರಿ ದೇಶವನ್ನು ಪ್ರತಿನಿಧಿಸಬೇಕೆಂಬ ಆಸೆ ಮೊಳೆಯಿತು. 15ರ ವಯಸ್ಸಿಗೆ ಸಾಯ್‌ಗೆ ಸೇರಿಕೊಂಡು ತರಬೇತಿ ಪಡೆದುಕೊಂಡೆ. 2010ರಲ್ಲಿ 19 ವಯಸ್ಸಿನೊಳಗಿನವರ ಟೂರ್ನಿಯು ಧರ್ಮಶಾಲಾದಲ್ಲಿ ನಡೆಯಿತು.

ADVERTISEMENT

ಅಲ್ಲಿ ನಾನು ಪ್ರತಿನಿಧಿಸಿದ್ದ ಸಾಯ್‌ ತಂಡವು ಕ್ವಾರ್ಟರ್‌ಫೈನಲ್‌ವರೆಗೂ ತಲುಪಿತ್ತು. ಶ್ರೀಧರ ಕುಮಾರ್‌, ಸತ್ಯಕುಮಾರ್‌, ಸೌಂದರ‍್ಯರಾಜನ್‌ ಸಾಯ್‌ನಲ್ಲಿ ತರಬೇತುದಾರರಾಗಿದ್ದರು. ಅವರ ಪ್ರೋತ್ಸಾಹ, ಬೆಂಬಲ ನನ್ನನ್ನು ಉತ್ತಮ ಆಟಗಾರನ್ನಾಗಿಸಿತು. ನಾನು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪೋಸ್ಟಲ್‌ ತಂಡವನ್ನು ಕೂಡಪ್ರತಿನಿಧಿಸಿದ್ದೇನೆ.

ಪ್ರೊ ಕಬಡ್ಡಿ ಲೀಗ್‌ಗೆ ಸೇರಲು ಪ್ರಯತ್ನ ಮಾಡಲಿಲ್ಲವೇ ಅಥವಾ ಅವಕಾಶ ಸಿಗಲಿಲ್ಲವೇ?
ತುಂಬಾ ಸಲ ಪ್ರಯತ್ನಿಸಿದೆ. ಆದರೆ ಅಲ್ಲಿನ ಕೆಟ್ಟ ರಾಜಕಾರಣದಿಂದಾಗಿ ನನಗೆ ಅವಕಾಶ ಸಿಗಲಿಲ್ಲ. ನ್ಯೂ ಕಬಡ್ಡಿ ಫೆಡರೇಷನ್‌ನಿಂದ ಕರೆ ಬಂದಿತು. ಐದಾರು ಸಲ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಲೀಗ್‌ಗೆ ಸೇರಿಕೊಂಡೆ.

ಐಐಪಿಕೆಎಲ್‌ ಕುರಿತು ಏನು ಹೇಳುತ್ತೀರಿ?
ಗ್ರಾಮೀಣ, ಯುವ ಹಾಗೂ ಅವಕಾಶ ವಂಚಿತ ಪ್ರತಿಭೆಗಳಿಗೆ ಅವಕಾಶ ಒದಗಿಸುವ ಕೆಲಸವನ್ನು ಐಐಪಿಕೆಎಲ್‌ ಮಾಡುತ್ತಿದೆ. ಚೊಚ್ಚಲ ಲೀಗ್‌ ಅತ್ಯಂತ ಯಶಸ್ವಿಯಾಗಿದೆ. ಆಟಗಾರರಿಗೆ ಉತ್ತಮ ಸೌಲಭ್ಯ, ಸೌಕರ್ಯಗಳನ್ನು ಒದಗಿಸಿದೆ. ಈ ಲೀಗ್‌ ತೊರೆದು ಬೇರೆ ಲೀಗ್‌ ಸೇರುವ ಆಲೋಚನೆಯಿಲ್ಲ. ಇಲ್ಲೇ ಮುಂದುವರಿಯುವೆ.

ಈ ಹಿಂದೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೀರಾ? ಮುಂದಿರುವ ಗುರಿ?
ಹೋದ ವರ್ಷ ವಿಶ್ವಕಪ್‌ ಟೂರ್ನಿಗೆ ರಾಷ್ಟ್ರೀಯ ತಂಡದ ಶಿಬಿರ ನಡೆಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದೆ. ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಆ ಮೂಲಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕೆಂಬುದು ನನ್ನ ಗುರಿಯಾಗಿದೆ.

ಐಐಪಿಕೆಎಲ್‌ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿತ್ತೆ?
ಆರ್ಮುಗಂ: ಇತ್ತು. ಸೆಮಿಫೈನಲ್‌ನಲ್ಲಿ ದಿಲರ್‌ ದಿಲ್ಲಿ ತಂಡವನ್ನು ಸೋಲಿಸುವದು ಸವಾಲೆನಿಸಿತ್ತು. ಏಕೆಂದರೆ ಅವರು 10ರಲ್ಲಿ ಎಂಟು ಪಂದ್ಯಗಳನ್ನು ಗೆದ್ದು ನಾಲ್ಕರ ಘಟ್ಟ ತಲುಪಿದ್ದರು. ಸಂಘಟಿತ ಹೋರಾಟದ ಬಲ, ಉತ್ತಮ ತಾಂತ್ರಿಕ ಕೌಶಲ್ಯ ತೋರಿದ ಕಾರಣ ಗೆಲುವು ಸಾಧ್ಯವಾಯಿತು.ಆ ಬಳಿಕ ಫೈನಲ್‌ ಪಂದ್ಯ ಕೂಡ ಪೈಪೋಟಿಯಿಂದ ಕೂಡಿತ್ತು. ಆದರೆ ಪುಣೆ ತಂಡವನ್ನು ಸೋಲಿಸುವ ಅದಮ್ಯ ವಿಶ್ವಾಸವಿತ್ತು.

ತಂಡದಲ್ಲಿ ಹೊಂದಾಣಿಕೆ, ಸಿದ್ಧತೆ ಹೇಗಿತ್ತು
ನಮ್ಮ ತಂಡದ ಕೋಚ್‌ಗಳಾಗಿದ್ದ ಮಂಜುನಾಥ ಹಾಗೂ ರಾಕೇಶ್‌ಕುಮಾರ್‌ ಅತ್ಯುತ್ತಮ ತರಬೇತಿ ನೀಡಿದರು. ಧಾರವಾಡ ಮತ್ತಿತರ ಕಡೆ ಶಿಬಿರಗಳನ್ನು ನಡೆಸಿ ಮಾನಸಿಕ ದೈಹಿಕವಾಗಿ ನಮ್ಮನ್ನು ಸಜ್ಜುಗೊಳಿಸಿದರು. ಆಟಗಾರರಲ್ಲಿಯೂ ಯಾವುದೇ ಭೇದ ಭಾವ ಇರಲಿಲ್ಲ. ಹಾಗಾಗಿ ಯಶಸ್ಸು ಕಾಣಲುಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.