
ಬೆಂಗಳೂರು: ನಾಯಕ ಅರವಿಂದ್ ಆರ್ಮುಗಂ ಹಾಗೂ ಪ್ರತ್ಯಾಂಶು ತೋಮರ್ ಅವರ ಆಟದ ನೆರವಿನಿಂದ ಕರ್ನಾಟಕ ತಂಡವು, ಚೆನ್ನೈನಲ್ಲಿ ನಡೆಯುತ್ತಿರುವ 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ 100–79ರಿಂದ ರಾಜಸ್ಥಾನ ತಂಡವನ್ನು ಮಣಿಸಿತು. ಸತತ ಮೂರನೇ ಗೆಲುವಿನೊಂದಿಗೆ ಎ ಗುಂಪಿನಿಂದ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ನಾಯಕತ್ವಕ್ಕೆ ತಕ್ಕಂತೆ ಆಡಿದ ಅರವಿಂದ್ 27 ಪಾಯಿಂಟ್ಸ್ ಗಳಿಸಿದರು. ಅವರಿಗೆ, ಪ್ರತ್ಯಾಂಶು (22 ಪಾಯಿಂಟ್ಸ್) ಬೆಂಬಲ ನೀಡಿದರು. ಶಶಾಂಕ್ ರೈ (15) ಹಾಗೂ ಆ್ಯರನ್ ಮೊಂತೆರೊ (12) ಅವರೂ ಕರ್ನಾಟಕದ ಗೆಲುವಿನಲ್ಲಿ ಮಿಂಚಿದರು. ರಾಜಸ್ಥಾನ ತಂಡದ ಆಶಿಶ್ ತ್ರಿವೇದಿ (25) ಹಾಗೂ ಅಕ್ಷಿತ್ ಹೂಡ (22) ಹೋರಾಟ ತೋರಿದರು.
ಮಹಿಳೆಯರ ವಿಭಾಗದಲ್ಲಿ ಸಂಘಟಿತ ಆಟ ಆಡಿದ ಕರ್ನಾಟಕ ತಂಡವು 103–50ರಿಂದ ಛತ್ತೀಸಗಢ ವಿರುದ್ಧ ನಿರಾಯಾಸ ಗೆಲುವು ಸಾಧಿಸಿತು. ದೆಹಲಿ ವಿರುದ್ಧ ನಡೆಯಲಿರುವ ಪಂದ್ಯವು ಕರ್ನಾಟಕ ವನಿತೆಯರ ತಂಡಕ್ಕೆ ನಿರ್ಣಾಯಕವಾಗಿದೆ.
ರಾಜ್ಯ ತಂಡದ ಮಹೆಕ್ ಶರ್ಮಾ 22 ಪಾಯಿಂಟ್ಸ್ ಗಳಿಸಿದರೆ, ಬಾಂಧವ್ಯ ಎಚ್.ಎಂ. (16), ಸಂಜನಾ ರಮೇಶ್ (13) ಹಾಗೂ ಶ್ರುತಿ ಅರವಿಂದ್ (12) ಅವರಿಗೆ ಉತ್ತಮ ಬೆಂಬಲ ನೀಡಿದರು. ಛತ್ತೀಸಗಢ ತಂಡದ ಗುಲ್ಭಾಶಾ ಅಲಿ 9 ಪಾಯಿಂಟ್ಸ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.