
ಪ್ರಜಾವಾಣಿ ವಾರ್ತೆ
ಮಂಗಳೂರು: ಕರ್ನಾಟಕದ ಬಾಲಕ ಮತ್ತು ಬಾಲಕಿಯರು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಶುಕ್ರವಾರ ಅಮೋಘ ಗೆಲುವು ದಾಖಲಿಸಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳದ ಸ್ಕೌಟ್ಸ್ ಭವನದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದಲ್ಲಿ ಕರ್ನಾಟಕ 28–18ರಲ್ಲಿ ಗೋವಾ ತಂಡವನ್ನು ಮಣಿಸಿತು. ಗುರುವಾರ ಮೊದಲ ಪಂದ್ಯದಲ್ಲಿ ಒಡಿಶಾವನ್ನು 35–3ರಲ್ಲಿ ಸೋಲಿಸಿದ್ದ ಬಾಲಕಿಯರು ಶುಕ್ರವಾರ ರಾಜಸ್ತಾನ ಎದುರು 19–16ರಲ್ಲಿ ಜಯ ಸಾಧಿಸಿದರು.
ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 25–11ರಲ್ಲಿ ಸೋತಿದ್ದರೂ ಗೋವಾ ಆಟಗಾರರು ಕರ್ನಾಟಕದ ವಿರುದ್ಧ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ಆರಂಭದಲ್ಲೇ ಆಕ್ರಮಣಕ್ಕೆ ಮುಂದಾದ ಕರ್ನಾಟಕ ಬಾಲಕರು ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಆಟಗಾರ, ನಾಯಕ ಗಣೇಶ ಮತ್ತು ಸಂತೋಷ್ ಶೂಟಿಂಗ್‌ನಲ್ಲಿ ಮಿಂಚಿದರು. ನಿರೂಪ್ ಮತ್ತು ಚಂದನ್ ಅವರ ಪ್ರತಿರೋಧವನ್ನು ಬೇಧಿಸಲು ಗೋವಾ ತಂಡ ಪರದಾಡಿತು. ‘ಸೆಂಟರ್’ನಲ್ಲಿ ಕರ್ನಾಟಕಕ್ಕೆ ನಿಹಾಲ್ ಉತ್ತಮ ಸಹಕಾರ ನೀಡಿದರು.
ಮೊದಲಾರ್ಧದಲ್ಲಿ 15 ಪಾಯಿಂಟ್ ಗಳಿಸಿದ ಕರ್ನಾಟಕ ಕೇವಲ ಐದು ಪಾಯಿಂಟ್ ಬಿಟ್ಟುಕೊಟ್ಟಿತು. ದ್ವಿತೀಯಾರ್ಧದಲ್ಲಿ ಆಕ್ರಮಣಕ್ಕೆ ಇಳಿದ ಗೋವಾ 13 ಪಾಯಿಂಟ್‌ಗಳನ್ನು ಕಲೆ ಹಾಕಿತು. ಬಾಲಕಿಯರ ವಿಭಾಗದಲ್ಲಿ ರಾಜಸ್ತಾನ ಪ್ರಬಲ ಪೈಪೋಟಿ ನೀಡಿದರೂ ಪಟ್ಟುಬಿಡದೆ ಸೆಣಸಿದ ಕರ್ನಾಟಕ ತಂಡದವರು ಗೆಲವು ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.