ADVERTISEMENT

ಸೈಕ್ಲಿಂಗ್ ಚಾಂಪಿಯನ್‍ಷಿಪ್‌: ಕರ್ನಾಟಕದ ಸ್ಪರ್ಧಿಗಳಿಗೆ ಆರು ಪದಕ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST
ನವೀನ್ ಜಾನ್
ನವೀನ್ ಜಾನ್   

ಹುಬ್ಬಳ್ಳಿ: ಕರ್ನಾಟಕದ ಸೈಕ್ಲಿಸ್ಟ್‌ಗಳು ಬುಧವಾರ ಬಿಕಾನೇರ್‌ನಲ್ಲಿ ಆರಂಭವಾದ 24ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಮೂರು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಜಯಿಸಿದ್ದಾರೆ.‌

ಭಾರತ ಸೈಕ್ಲಿಂಗ್‌ ಫೆಡರೇಷನ್‌ ಹಾಗೂ ಭಾರತೀಯ ರೈಲ್ವೆ ಕ್ರೀಡಾ ಮಂಡಳಿಯ ಸಹಯೋಗದೊಂದಿಗೆ ಆಯೋಜನೆಯಾಗಿರುವ ನಾಲ್ಕು ದಿನಗಳ ಚಾಂಪಿಯನ್‌ಷಿಪ್‌ ಇದಾಗಿದೆ.

ಪುರುಷರ ವಿಭಾಗದ 40 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ಬೆಂಗಳೂರಿನ ನವೀನ್ ಜಾನ್ 50 ನಿಮಿಷ 15.782 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಹೋದ ವರ್ಷದ ಸ್ಪರ್ಧೆಯಲ್ಲಿ ನವೀನ್‌ ಇದೇ ಗುರಿ ಮುಟ್ಟಲು 54 ನಿಮಿಷ ತೆಗೆದುಕೊಂಡಿದ್ದರು. ಈ ಬಾರಿ ವೇಗ ಹೆಚ್ಚಿಸಿಕೊಂಡು ರಾಷ್ಟ್ರೀಯ ಟೂರ್ನಿಯಲ್ಲಿ 2014ರಿಂದ ಸತತ ಐದನೇ ವರ್ಷ ಚಿನ್ನ ಗೆದ್ದ ಹೆಗ್ಗಳಿಕೆಗೆ ಪಾತ್ರರಾದರು.

ADVERTISEMENT

18 ವರ್ಷದೊಳಗಿನ ಬಾಲಕಿಯರ ವಿಭಾಗದ 20 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಸೌಮ್ಯ ಅಂತಾಪುರ 31 ನಿಮಿಷ 12.500 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ರಾಜ್ಯಕ್ಕೆ ಇನ್ನೊಂದು ಚಿನ್ನ ಅನುಪಮಾ ಗುಳೇದ ತಂದುಕೊಟ್ಟರು.

14 ವರ್ಷದೊಳಗಿನ ಬಾಲಕಿಯರ ವಿಭಾಗದ 10 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದ ಅನುಪಮಾ 16 ನಿ. 08.602 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.

23 ವರ್ಷದೊಳಗಿನ ಪುರುಷರ ವಿಭಾಗದ 40 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ಬೆಂಗಳೂರಿನ ಜಿ. ಟಿ. ಗಗನರೆಡ್ಡಿ (54 ನಿ. 22.356ಸೆ.) ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

14 ವರ್ಷದೊಳಗಿನವರ ಬಾಲಕರ ವಿಭಾಗದ 15 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ರಾಘವೇಂದ್ರ ವಂದಾಲ (23ನಿ. 14.147ಸೆ.), 16 ವರ್ಷದೊಳಗಿನ ಬಾಲಕರ ವಿಭಾಗದ 20 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾನಿಲಯದ ಮಲ್ಲಿಕಾರ್ಜುನ ಯಾದವಾಡ (28 ನಿ.16.128ಸೆ.) ಕಂಚಿನ ಪದಕಗಳನ್ನು ಗೆದ್ದುಕೊಂಡರು.

ಆರನೇ ಪ್ರಶಸ್ತಿಯತ್ತ ಕಣ್ಣು: ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ 2014ರಿಂದ ಸತತ ಐದು ವರ್ಷ ಸಮಗ್ರ ಪ್ರಶಸ್ತಿ ಜಯಿಸಿದೆ. ಈ ಬಾರಿಯೂ ಇದನ್ನು ಮುಂದುವರಿಸಲು ಕಾಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.