ADVERTISEMENT

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದ ಕರ್ನಾಟಕ ತಂಡ

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ಮಹಿಳೆಯರ ವಿಭಾಗದಲ್ಲಿ ಐದನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 12:38 IST
Last Updated 10 ಏಪ್ರಿಲ್ 2022, 12:38 IST
ಕಂಚಿನ ಪದಕ ಗೆದ್ದ ಕರ್ನಾಟಕ ತಂಡ
ಕಂಚಿನ ಪದಕ ಗೆದ್ದ ಕರ್ನಾಟಕ ತಂಡ   

ಬೆಂಗಳೂರು: ಕರ್ನಾಟಕ ತಂಡದವರು ಚೆನ್ನೈನಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಣಯಿಸುವುದಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯ ರೈಲ್ವೆ ತಂಡವನ್ನು96-79ರಲ್ಲಿ ಕರ್ನಾಟಕ ಮಣಿಸಿತು.

ಆರಂಭದಲ್ಲಿ ರೈಲ್ವೆ ತಂಡ ಅಮೋಘ ಆಟವಾಡಿತು. ಹೀಗಾಗಿ ಮೊದಲ ಕ್ವಾರ್ಟರ್ ಮುಕ್ತಾಯಗೊಂಡಾಗ ತಂಡ 26–17ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಕ್ವಾರ್ಟರ್‌ನಲ್ಲಿ ಕರ್ನಾಟಕ ‍ಪ್ರಬಲ ತಿರುಗೇಟು ನೀಡಿತು. ಅನಿಲ್ ಕುಮಾರ್ ಮತ್ತು ಅಭಿಷೇಕ್ ಗೌಡ ಅವರ ಅಮೋಘ ಆಟದಿಂದ ತಂಡ 35–34ರ ಮುನ್ನಡೆ ಸಾಧಿಸಿತು.

ಇದೇ ಲಯವನ್ನು ಮುಂದುವರಿಸಿದ ಕರ್ನಾಟಕ ದ್ವಿತೀಯಾರ್ಧದಲ್ಲೂ ಪಾಯಿಂಟ್‌ಗಳನ್ನು ಕಲೆ ಹಾಕುತ್ತ ಸಾಗಿತು. ಮೂರನೇ ಕ್ವಾರ್ಟರ್‌ ಮುಗಿದಾಗ 10 ಪಾಯಿಂಟ್‌ಗಳ ಮುನ್ನಡೆ ಗಳಿಸಲು ತಂಡಕ್ಕೆ ಸಾಧ್ಯವಾಯಿತು. ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾದ ಕೊನೆಯ ಕ್ವಾರ್ಟರ್‌ನಲ್ಲಿ ಎದುರಾಳಿ ತಂಡ ತಿರುಗೇಟು ನೀಡಲು ಪ್ರಯತ್ನಿಸಿತು. ಆದರೆ ಕರ್ನಾಟಕ ಪಟ್ಟು ಬಿಡಲಿಲ್ಲ. ಹೀಗಾಗಿ ಗೆಲುವು ತನ್ನದಾಗಿಸಿಕೊಂಡಿತು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತು. ಪಂಜಾಬ್ ಎದುರಿನ ರೋಚಕ ಪಂದ್ಯದಲ್ಲಿ ತಂಡ 74–71ರಲ್ಲಿ ಜಯ ಸಾಧಿಸಿತು. ವರ್ಷನಂದಿನಿ, ಚಂದನ ಮತ್ತು ಸಹನಾ ಕ್ರಮವಾಗಿ 22, 14 ಮತ್ತು 10ನ ಪಾಯಿಂಟ್‌ ಗಳಿಸಿ ಮಿಂಚಿದರು. ಪಂಜಾಬ್‌ಗಾಗಿ ಋತಿಕಾ 26, ಕಾವ್ಯಾ ಸಿಂಗ್ 14, ಮನ್‌ಪ್ರೀತ್‌ ಕೌರ್ 13 ಮತ್ತು ಕನಿಷ್ಕ ಧಿರ್ 10 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.