ADVERTISEMENT

ರಾಜ್ಯ ಜೂನಿಯರ್, ಸಬ್‌ ಜೂನಿಯರ್ ಈಜು: ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 16:09 IST
Last Updated 13 ಜುಲೈ 2025, 16:09 IST
ಸಬ್‌ ಜೂನಿಯರ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಆತಿಥೇಯ ಬಿಎಸಿ ತಂಡ.
ಸಬ್‌ ಜೂನಿಯರ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಆತಿಥೇಯ ಬಿಎಸಿ ತಂಡ.   

ಬೆಂಗಳೂರು: ಆತಿಥೇಯ ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡ, ಭಾನುವಾರ ಇಲ್ಲಿ ಮುಕ್ತಾಯಗೊಂಡ ಎನ್‌ಆರ್‌ಜೆ ರಾಜ್ಯ ಸಬ್‌ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಜೂನಿಯರ್ ಮತ್ತು ಸಬ್‌ ಜೂನಿಯರ್ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. 

ಬಸವನಗುಡಿಯ ಬಿಎಸಿಯಲ್ಲಿ ನಡೆದ ಈ ಕೂಟದಲ್ಲಿ ಡಾಲ್ಫಿನ್‌ ಕ್ಲಬ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು. ಸಬ್‌ ಜೂನಿಯರ್ ವಿಭಾಗದಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ) ರನ್ನರ್ ಅಪ್ ಸ್ಥಾನ ಗಳಿಸಿತು. ಐದು ದಿನಗಳ ಈ ಕೂಟದಲ್ಲಿ ಒಟ್ಟು 23 ಕೂಟ ದಾಖಲೆಗಳು ನಿರ್ಮಾಣವಾದವು.

ಸಬ್‌ ಜೂನಿಯರ್ ಬಾಲಕರ ಒಂದನೇ ಎ ಗುಂಪಿನಲ್ಲಿ ದಕ್ಷಣ್‌ ಎಸ್‌. (ಬಿಎಸಿ), ಒಂದನೇ ಬಿ ಗುಂಪಿನಲ್ಲಿ ಸಮರ್ಥ ಗೌಡ ಬಿ.ಎಸ್‌. (ಬಿಎಸಿ), ಎರಡನೇ ಎ ಗುಂಪಿನಲ್ಲಿ ಶರಣ್‌ ಎಸ್‌. (ಬಿಎಸಿ), ಎರಡನೇ ಬಿ ಗುಂಪಿನಲ್ಲಿ ಜೈ ಸಿಂಗ್‌ (ಎಸಿಇ) ಮತ್ತು ಎಸ್‌. ಕ್ರಿಷ್‌ (ಬಿಎಸಿ), ಮೂರನೇ ಎ ಗುಂಪಿನಲ್ಲಿ ಎಚ್‌.ಅಮಿತ್ ಪವನ್‌ (ಜೆಐಆರ್‌ಎಸ್‌), ಮೂರನೇ ಬಿ ಗುಂಪಿನಲ್ಲಿ ಅವೀಕ್‌ ನಮಿತ್‌ ಗೌಡ (ಮತ್ಸ್ಯ) ಅವರು ವೈಯಕ್ತಿಕ ಪ್ರಶಸ್ತಿ ಪಡೆದರು.

ADVERTISEMENT

ಸಬ್‌ ಜೂನಿಯರ್ ಬಾಲಕಿಯರ ಒಂದನೇ ಎ ಗುಂಪಿನಲ್ಲಿ ತಾನ್ಯಾ ಎಸ್‌. (ಜೆಐಆರ್‌ಎಸ್‌), ಒಂದನೇ ಬಿ ಗುಂಪಿನಲ್ಲಿ ತನಿಶಿ ಗುಪ್ತಾ (ಡಾಲ್ಫಿನ್‌), ಎರಡನೇ ಎ ಗುಂಪಿನಲ್ಲಿ ತ್ರಿಷಾ ಸಿಂಧು (ಗ್ಲೋಬಲ್‌) ಮತ್ತು ಮೀರಾ ನಂಬಿಯಾರ್ (ಕೆಎಸ್‌ಎ), ಎರಡನೇ ಬಿ ಗುಂಪಿನಲ್ಲಿ ಸುಮನ್ವಿ ವಿ (ಡಿಕೆವಿ), ಮೂರನೇ ಎ ಗುಂಪಿನಲ್ಲಿ ನೈರಾ ಬೋಪಣ್ಣ ಕೆ (ಸ್ವಿಮ್‌ಲೈಫ್‌) ಮತ್ತು ಸ್ತುತಿ ಸಿಂಗ್ (ಬಿಎಸ್‌ಎ), ಮೂರನೇ ಬಿ ಗುಂಪಿನಲ್ಲಿ ಝರಣಾ ಸಿಸೋಡಿಯಾ (ಏಕಲವ್ಯ) ಅವರು ವೈಯಕ್ತಿ ಚಾಂಪಿಯನ್‌ಗಳಾದರು.

ಭಾನುವಾರ ನಾಲ್ಕು ಕೂಟ ದಾಖಲೆಗಳಾದವು. ಇದರಲ್ಲಿ ಎರಡು ದಾಖಲೆಗಳ ಗೌರವ ಶರಣ್ ಅವರದಾಯಿತು. ಬಾಲಕರ ಎರಡನೇ ಗುಂಪಿನ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆಯನ್ನು ಅವರು 54.72 ಸೆ.ಗಳಲ್ಲಿ ಪೂರೈಸಿ, ಇಶಾನ್‌ ಮೆಹ್ರಾ ಹೆಸರಿನಲ್ಲಿ 54.92 ಸೆ.ಗಳ ದಾಖಲೆ ಮುರಿದರು. 1500 ಮೀ. ಫ್ರೀಸ್ಟೈಲ್‌ ಸ್ಪರ್ಧೆಯನ್ನು 16ನಿ.40.92 ಸೆ.ಗಳಲ್ಲಿ ಕ್ರಮಿಸಿ ಸಿ.ಜೆ.ಸಂಜಯ್‌ ಹೆಸರಿನಲ್ಲಿದ್ದ 16ನಿ.50.06 ಸೆ.ಗಳ ದಾಖಲೆ ಮುಳುಗಿಸಿದರು.

ಬಾಲಕಿಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯನ್ನು ತಾನ್ಯಾ ಎಸ್‌. 2ನಿ.40.26 ಸೆ.ಗಳಲ್ಲಿ ಮುಗಿಸಿ, ಬಿಎಸಿಯ ಲಕ್ಷ್ಯ ಎಸ್‌. ಹೆಸರಿನಲ್ಲಿದ್ದ 2ನಿ.40.53 ಸೆ.ಗಳ ದಾಖಲೆ ಮುರಿದರು. 

100 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ (ಒಂದನೇ ಎ ಗುಂಪು) ಡಾಲ್ಫಿನ್‌ ಕ್ಲಬ್‌ನ ರುಜುಲಾ ಎಸ್‌. ಅವರು 58.65 ಸೆ.ಗಳಲ್ಲಿ ಪೂರೈಸಿ, ತಮ್ಮದೇ ದಾಖಲೆಯನ್ನು (59.16 ಸೆ.) ದಾಖಲೆ ಸುಧಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.