
ಬೆಂಗಳೂರಿನ ಲೋಕಭವನದಲ್ಲಿ ಭಾನುವಾರ 18 ಕ್ರೀಡಾ ಸಾಧಕರಿಗೆ (ನಿಂತವರು) ಕರ್ನಾಟಕ ಒಲಿಂಪಿಕ್ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ‘ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಶೇ 3ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ಶೇ 2ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಿದೆ. ಜನವರಿ ಮೊದಲ ವಾರದಲ್ಲೇ ನೇಮಕಾತಿಯ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಲೋಕಭವನದ (ರಾಜಭವನ) ಗಾಜಿನ ಮನೆಯಲ್ಲಿ ಭಾನುವಾರ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರೊಂದಿಗೆ 18 ಸಾಧಕ ಕ್ರೀಡಾಪಟುಗಳಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಎಒ) 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಇಲಾಖಾ ನೇಮಕಾತಿಯಲ್ಲಿ ಮೀಸಲಾತಿ ಪ್ರಮಾಣವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.
‘ಕಠಿಣ ಪರಿಶ್ರಮ ಹಾಗೂ ಗುರಿ ಸಾಧನೆ ಮಾಡುವ ಛಲವಿದ್ದರೆ ಕರ್ನಾಟಕದ ಕ್ರೀಡಾಪಟುಗಳೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದಾಗಿದೆ. ಕ್ರೀಡಾಪಟುಗಳಿಗೆ ಗುರಿಸಾಧನೆಯೇ ಜೀವನದ ಧ್ಯೇಯವಾಗಬೇಕು’ ಎಂದರು.
‘1958ರಲ್ಲಿ ಪ್ರಾರಂಭವಾದ ಕರ್ನಾಟಕ ಒಲಿಂಪಿಕ್ ಸಂಸ್ಥೆಯು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಂಸ್ಥೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನೂ ನಾನೇ ನೆರವೇರಿಸಿದ್ದೇನೆ. ಇಡೀ ದೇಶದಲ್ಲಿಯೇ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಂತೆ ನಮ್ಮಲ್ಲಿಯೂ ಸಂಸ್ಥೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.
ಗೆಹಲೋತ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಯುವ ಸಮುದಾಯ ಇದರ ಲಾಭ ಪಡೆದು ಹೆಚ್ಚಿನ ಸಾಧನೆ ಮಾಡಬೇಕು. ಕರ್ನಾಟಕ ಒಲಿಂಪಿಕ್ ಸಂಸ್ಥೆಯು ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡುತ್ತಿರುವುದು ಮಾದರಿ ಕೆಲಸ’ ಎಂದು ಶ್ಲಾಘಿಸಿದರು.
18 ಸಾಧಕರಿಗೆ ಗೌರವ: ಬಿ.ಉನ್ನತಿ ಅಯ್ಯಪ್ಪ (ಅಥ್ಲೆಟಿಕ್ಸ್), ಆಯುಷ್ ಶೆಟ್ಟಿ (ಬ್ಯಾಡ್ಮಿಂಟನ್), ಪ್ರತ್ಯಾಂಶು ತೋಮರ್ (ಬ್ಯಾಸ್ಕೆಟ್‌ಬಾಲ್), ಎಸ್.ತನ್ವಿ (ಫೆನ್ಸಿಂಗ್), ನಿಖಿಲ್‌ರಾಜ್ ಎಂ (ಫುಟ್‌ಬಾಲ್), ಐಶ್ವರ್ಯಾ ವಿ. (ಕಯಾಕಿಂಗ್ ಮತ್ತು ಕನೊಯಿಂಗ್), ಎಸ್.ಡಿ. ಪ್ರಜ್ವಲ್ ದೇವ್ (ಟೆನಿಸ್), ಜಗದೀಪ್ ದಯಾಳ್ (ಹಾಕಿ), ಸುಜನ್ (ನೆಟ್‌ಬಾಲ್), ದಿವ್ಯಾ ಟಿ.ಎಸ್. (ರೈಫಲ್ ಶೂಟಿಂಗ್), ಆಕಾಶ್ ಕೆ.ಜೆ (ಟೇಬಲ್ ಟೆನಿಸ್), ಸತೀಶ್ ಬಸವರಾಜ್ (ಪತ್ರಿಕಾ ಛಾಯಾಗ್ರಾಹಕ), ಪ್ರಣವಿ ಎಸ್.ಅರಸ್ (ಗಾಲ್ಫ್) ಪರ ಅವರ ತಂದೆ ಶರತ್‌ಚಂದ್ರರಾಜ್ ಅರಸ್, ಉದಯ್ ನಾಯ್ಡು (ಜಿಮ್ನಾಸ್ಟಿಕ್) ಪರ ಅವರ ತಾಯಿ ದೀಪಾ, ಆಕಾಶ್ ಮಣಿ (ಈಜು) ಪರ ಅವ ತಂದೆ ಎ. ಮಣಿ ಪ್ರಶಸ್ತಿ ಸ್ವೀಕರಿಸಿದರು. ಜೀವಮಾನದ ಸಾಧನೆಗಾಗಿ ಪಿ.ಎಸ್.ಜರೀನಾ (ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ), ಮುಕುಂದ್ ಕಿಲ್ಲೇಕರ್ (ಅಂತರರಾಷ್ಟ್ರೀಯ ಬಾಕ್ಸರ್), ವಿ.ಎಸ್.ವಿನಯ (ಅಂತರರಾಷ್ಟ್ರೀಯ ಹಾಕಿ ಆಟಗಾರ) ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.