
ನವದೆಹಲಿ: ಕರ್ನಾಟಕದ ಉದಯೋನ್ಮುಖ ಶೂಟರ್ ಜೊನಾಥನ್ ಗ್ಯಾವಿನ್ ಆಂಥೋನಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು.
16 ವರ್ಷದ ಜೊನಾಥನ್ ಅವರು ಶನಿವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಸಬ್ ಯೂತ್, ಯೂತ್ ಮತ್ತು ಜೂನಿಯರ್ ವಿಭಾಗಗಳಲ್ಲಿ ಅಗ್ರಸ್ಥಾನದೊಂದಿಗೆ ಪಾರಮ್ಯ ಮೆರೆದರು.
ಯೂತ್ ಫೈನಲ್‌ನಲ್ಲಿ ಜೊನಾಥನ್ 240.0 ಅಂಕ ಗಳಿಸಿದರು. ಪಂಜಾಬ್‌ನ ಗುಂತಜ್‌ಪ್ರೀತ್ ಸಿಂಗ್ (236.0) ಮತ್ತು ಉತ್ತರಪ್ರದೇಶದ ಸವೇಜ್ ಖಾನ್ (214.3) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು.
ಜೂನಿಯರ್ ಫೈನಲ್‌ನಲ್ಲಿ ಜೊನಾಥನ್ 240.5 ಅಂಕಗಳೊಂದಿಗೆ ಚಿನ್ನ ಗೆದ್ದರು. ಹರಿಯಾಣದ ಶಿವ ನರ್ವಾಲ್ (240.3) ಬೆಳ್ಳಿ ಮತ್ತು ರಾಜಸ್ಥಾನ ಯೋಗೇಶ್ ಕುಮಾರ್ (218.2) ಕಂಚು ತಮ್ಮದಾಗಿಸಿಕೊಂಡರು.
ಕರ್ನಾಟಕದ ಹದಿಹರೆಯದ ಶೂಟರ್ ತಿಲೋತ್ತಮಾ ಸೇನ್ ಶುಕ್ರವಾರ ರಾಷ್ಟ್ರೀಯ ಶೂಟಿಂಗ್ (ರೈಫಲ್) ಚಾಂಪಿಯನ್‌ಷಿಪ್‌ನಲ್ಲಿ ಮತ್ತೆ ಮೂರು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದಿದ್ದಾರೆ.
ಜೂನಿಯರ್ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ತಿಲೋತ್ತಮಾ ಅವರು ಫೈನಲ್‌ನಲ್ಲಿ 253.1 ಅಂಕಗಳೊಂದಿಗೆ ಚಿನ್ನ ಗೆದ್ದರು. ಯೂತ್ ವಿಭಾಗದಲ್ಲೂ ಅವರು ಚಿನ್ನದ ಸಾಧನೆ ಮೆರೆದರು.
ಮಹಿಳಾ ಯೂತ್ ತಂಡದ ವಿಭಾಗದಲ್ಲಿ ತಿಲೋತ್ತಮಾ, ಅನುಷ್ಕಾ ತೋಕೂರು ಮತ್ತು ಹೃದಯಶ್ರೀ ಅವರನ್ನು ಒಳಗೊಂಡ ಕರ್ನಾಟಕ ತಂಡವು (188.7.1) ಚಿನ್ನ ಗೆದ್ದುಕೊಂಡಿತು. ಜೂನಿಯರ್ ಮಹಿಳಾ ತಂಡ ವಿಭಾಗದಲ್ಲಿ ಇದೇ ಶೂಟರ್‌ಗಳ ತಂಡವು (1887.1) ಬೆಳ್ಳಿ ಪದಕ ಜಯಿಸಿತು.
17 ವರ್ಷದ ತಿಲೋತ್ತಮಾ ಅವರು ಹಿಂದಿನ ವಾರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯ ಬೇರೆ ಬೇರೆ ವಿಭಾಗಗಳಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.