ಮಂಗಳೂರು: ಮಹಾರಾಷ್ಟ್ರದಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಮಹಿಳೆಯರ ರಾಷ್ಟ್ರೀಯ 70ನೇ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿದೆ. ತಂಡದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಆರು ಮಂದಿ, ತುಮಕೂರು, ಭದ್ರಾವತಿ, ಚಿಂತಾಮಣಿ ಮತ್ತು ಬೆಂಗಳೂರಿನ ತಲಾ ಒಬ್ಬರು ಇದ್ದರು.
ರಾಯಘಡ ಜಿಲ್ಲೆಯ ಕಾಮೋತೆಯಲ್ಲಿ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಕರ್ನಾಟಕದ ಮಹಿಳೆಯರು ತಮಿಳುನಾಡು ವಿರುದ್ಧ 35–30, 31–35, 35–26ರಲ್ಲಿ ಜಯ ಗಳಿಸಿದರು.
ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಲೀಗ್ ಹಂತದಲ್ಲಿ ಕರ್ನಾಟಕ ತಂಡ ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಛತ್ತೀಸ್‌ಗಡ ಎದುರು 35-8, 35-11ರ ಗೆಲುವು ಸಾಧಿಸಿತ್ತು. ಅಂತಿಮ ಎರಡು ಸುತ್ತಿನ ಪಂದ್ಯಗಳು ರೋಚಕವಾಗಿದ್ದವು. ನಾಲ್ಕರ ಘಟ್ಟದಲ್ಲಿ ಕೇರಳ ತಂಡದಿಂದ ಕರ್ನಾಟಕಕ್ಕೆ ಪ್ರಬಲ ಪೈಪೋಟಿ ಎದುರಾಯಿತು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಮೇಘನಾ ನೇತೃತ್ವದ ಕರ್ನಾಟಕ ತಂಡ ಎರಡನೇ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿತು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಎದುರಾಳಿಗಳು ಮತ್ತೆ ಕಾಡಿದರು. ಛಲ ಬಿಡದ ಕರ್ನಾಟಕ 25-35, 35-20, 35-30ರಲ್ಲಿ ಜಯ ಗಳಿಸಿತು.
ಫೈನಲ್‌ನಲ್ಲಿ ತಮಿಳುನಾಡು ತಂಡ ಕೂಡ ಪರಿಣಾಮಕಾರಿ ಆಟದ ಮೂಲಕ ಗಮನ ಸೆಳೆಯಿತು. ಕರ್ನಾಟಕದ ಬ್ಯಾಕ್‌ಪ್ಲೇಯರ್ಸ್ ಸಹನಾ ಮತ್ತು ಲಕ್ಷ್ಮಿದೇವಿ ಉತ್ತಮ ರಕ್ಷಣಾತ್ಮಕ ಆಟವಾಡಿದರು. ಫ್ರಂಟ್ ಪ್ಲೇಯರ್‌ಗಳಾದ ಪಲ್ಲವಿ ಬಿ.ಎಸ್ ಮತ್ತು ಮೇಘನಾ ಆಕ್ರಮಣಕಾರಿ ಆಟದ ಮೂಲಕ ಮಿಂಚಿದರು. ಪಲ್ಲವಿ ಹಾಗೂ ಸಹನಾ ಎಚ್.ವೈ ಅವರು ಫೆಡರೇಷನ್ ನೀಡುವ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ರಾಜ್ಯ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಿನೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.